ಮೈಸೂರುಸುದ್ದಿ ಸಂಕ್ಷಿಪ್ತ

ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಸಿಗದಿರಲು ಹಿಂದಿನ ಆಯುಕ್ತರು ಹೊಣೆ ಎಂಬ ಆರೋಪ ಸಂಪೂರ್ಣ ಸುಳ್ಳು: ಬೆಟಸೂರಮಠ ಸ್ಪಷ್ಟನೆ

ಮೈಸೂರು, ಮೇ 6: ಪ್ರಸಕ್ತ ವರ್ಷ ಸ್ವಚ್ಛತೆಯಲ್ಲಿ ಮೈಸೂರಿಗೆ ಪ್ರಥಮ ಸ್ಥಾನ ಸಿಗದಿರಲು ಹಿಂದಿನ ಆಯುಕ್ತರು ಹೊಣೆ ಎಂದು ಆರೋಪಿಸಿರುವ ಮೇಯರ್ ಎಂ.ಜೆ.ರವಿಕುಮಾರ್ ಅವರ ಹೇಳಿಕೆಯು ಸಂಪೂರ್ಣ ಸುಳ್ಳಾಗಿದ್ದು,  ನಿರಾಕರಿಸುತ್ತೇನೆ ಎಂದು ಪಾಲಿಕೆಯ ನಿವೃತ್ತ ಆಯುಕ್ತ ಡಾ.ಸಿ.ಜಿ.ಬೆಟಸೂರಮಠ ಸ್ಪಷ್ಟಪಡಿಸಿದ್ದಾರೆ.

2014-2016 ರವರೆಗೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿರುವ ಅವರು, ತಮ್ಮ ಸೇವಾ ಅವಧಿಯಲ್ಲೇ ಇಂಡಿಯಾ ಟುಡೇ ಸ್ಟಡಿ ಗ್ರೂಪಿನಿಂದ ಮೈಸೂರು ನಗರಕ್ಕೆ ಮೂರು ಅತ್ಯುತ್ತಮ ಪ್ರಶಸ್ತಿಗಳು, ಭಾರತ ಸರ್ಕಾರದ ನಗರಾಭಿವರದ್ಧಿ ಇಲಾಖೆಯಿಂದ ಸತತವಾಗಿ 2 ಬಾರಿ ಮೈಸೂರು ಭಾರತದ ಸ್ವಚ್ಛ ನಗರವಾಗಿ ಪ್ರಶಸ್ತಿ ಪಡೆದಿದೆ. ನವದೆಹಲಿಯ ವಿಜ್ಞಾನ ಮತ್ತು ಪರಿಸರ ಸಂಸ್ಥೆಯಿಂದ ದೇಶದ ಸ್ವಚ್ಛನಗರ ಪ್ರಶಸ್ತಿ ದೊರೆತಿದೆ. ಭಾರತ ಸರ್ಕಾರದಿಂದ ದೇಶದ ಪ್ರಥಮ ಬಯಲು ಶೌಚ ಮುಕ್ತ ಪ್ರಶಸ್ತಿಯೂ ದೊರೆತಿದೆ. ಇಷ್ಟೆಲ್ಲಾ ಪ್ರಶಸ್ತಿಗಳು ಮೈಸೂರು ನಗರಕ್ಕೆ ದೊರೆತಿದ್ದರೂ ಇದಕ್ಕೆ ನಾನು ಕಾರಣ ಎಂದು ಎಲ್ಲಿಯೂ ಹೇಳಿಲ್ಲ. ಈ ಪ್ರಶಸ್ತಿಗಳ ಕೀರ್ತಿ ಮೈಸೂರಿನ ನಾಗರಿಕರು, ಪೌರಕಾರ್ಮಿಕರು, ಚುನಾಯಿತ ಪ್ರತಿನಿಧಿಗಳು, ಪಾಲಿಕೆಯ ಸದಸ್ಯರು, ಸಂಘ-ಸಂಸ್ಥೆಗಳು, ಪಾಲಿಕೆಯ ಅಧಿಕಾರಿಗಳು ಹಾಗೂ ಸೇವಾ ಸಿಬ್ಬಂದಿ ಮತ್ತು ಮಾಧ್ಯಮ ಮಿತ್ರರಿಗೆ ಸಲ್ಲುತ್ತದೆ ಎಂದು ಬಹಿರಂಗವಾಗಿ ಹೇಳಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಸಿಗದಿರಲು ಶೌಚಾಲಯ ನಿರ್ಮಾಣ ಒಂದೇ ಕಾರಣವಲ್ಲ. ಏಕೆಂದರೆ ಈಗಾಗಲೇ ಮೈಸೂರು ಬಯಲು ಶೌಚಮುಕ್ತ ನಗರವಾಗಿ ಘೋಷಣೆಯಾಗಿದೆ. ಶೌಚಾಲಯ ನಿರ್ಮಾಣಕ್ಕೆ ಟೆಂಡರ್ ಕರೆಯಲು ವಿಳಂಬವಾಗಿರುವುದಾಗಿ ಹೇಳಲಾಗಿದೆ. ನನ್ನ ಅವಧಿಯಲ್ಲಿ ಫಲಾನುಭವಿಗಳ ಆಯ್ಕೆ, ಪರಿಶೀಲನೆ ನಡೆದು ಟೆಂಡರ್ ಕರೆಯಲಾಗಿದೆ. ನಾನು ನಿವೃತ್ತಿಯಾಗಿ 9 ತಿಗಳು ಕಳೆದಿವೆ. ಈ ಅವಧಿಯಲ್ಲಿ ಈಗಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ಅವರ ಸಾಧನೆಯೇನು? ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುವ ಬದಲು ಹಿಂದಿನ ಆಯುಕ್ತರು ಹಾಗೂ ಅಧಿಕಾರಿಗಳು ಕಾರಣ ಎಂದು ಹೇಳುವುದು ಸರಿಯಲ್ಲ. ಪ್ರಶಸ್ತಿ ಸಿಗದಿರಲು ಇನ್ನೂ ಹಲವಾರು ಕಾರಣಗಳಿವೆ. ಈ ಕುರಿತು ಆತ್ಮಾವಲೋಕನ ಮಾಡಿಕೊಂಡು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ನಾವು ಎಲ್ಲಿ ಎಡವಿದ್ದೇವೆ, ಮುಂದೇನು ಮಾಡಬೇಕು ಎನ್ನುವ ಬಗ್ಗೆ ಪರಾಮರ್ಶನೆ ಮಾಡುವ ಬದಲು ಹಿಂದಿನ ಆಯುಕ್ತರ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸುವುದು ಅವರ ಗೌರವಕ್ಕೆ ಹಾಗೂ ಸ್ಥಾನಕ್ಕೆ ತಕ್ಕುದಲ್ಲ. ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಹಾಗೂ ಇದನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ ಎಂದು  ಸ್ಪಷ್ಟಪಡಿಸಿದ್ದಾರೆ. (ವರದಿ: ಎಲ್.ಜಿ)

 

Leave a Reply

comments

Related Articles

error: