ಮೈಸೂರು

ಪೋಷಕರ ವಿರೋಧದ ನಡುವೆಯೇ ವಿವಾಹವಾದ ಯುವತಿ; ಎಳೆದೊಯ್ಯಲು ಯತ್ನಿಸಿದ ತಂದೆ ; ಮಗಳಿಂದಲೇ ದೂರು ದಾಖಲು

ಮೈಸೂರು,ಡಿ.21: – ಪ್ರೀತಿಸಿ ಮದುವೆಯಾದಳೆಂಬ ಕಾರಣಕ್ಕೆ ಮಗಳನ್ನು  ಸ್ವಂತ ತಂದೆಯೇ ಜುಟ್ಟು ಹಿಡಿದು ಎಳೆದೊಯ್ದ ಘಟನೆ ನಂಜನಗೂಡಿನಲ್ಲಿ ನಡೆದಿದ್ದು, ಇದರ ವಿರುದ್ಧ ಸಿಟ್ಟಿಗೆದ್ದ ಮಗಳು ತಂದೆಯ ಮೇಲೆಯೇ ದೂರು ಕೊಟ್ಟಿದ್ದಾಳೆ.

ಪೋಷಕರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನನ್ನು ಯುವತಿಯೋರ್ವಳು ಮೈಸೂರಿನ ನಂಜನಗೂಡಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದಳು.  ತನ್ನ ಮಾತನ್ನ ಲೆಕ್ಕಿಸದೇ ಹೋದ ಮಗಳನ್ನ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಎಳೆದುಕೊಂಡು ಹೋಗಲು ತಂದೆ ಯತ್ನಿಸಿದ್ದಾರೆ. ಆ ವೇಳೆ ಮಗಳ ಮಾಂಗಲ್ಯ ಸರ ಕಿತ್ತು ಹಾಕಿದ್ದಾರೆ. ಆದರೂ ತಂದೆಗೆ ಕ್ಯಾರೇ ಎನ್ನದ  ಮಗಳು ಸಾರ್ವಜನಿಕರ ನೆರವಿನಿಂದ ತಪ್ಪಿಸಿಕೊಂಡು ತನ್ನ  ಪ್ರಿಯತಮನನ್ನು ಸೇರಿಕೊಂಡಿದ್ದಾಳೆ. ಬಳಿಕ ಮಗಳು ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕು ಎಂದು ಸಾರ್ವಜನಿಕವಾಗಿ ಅಲವತ್ತುಕೊಂಡಿದ್ದಾಳೆ.
ನಂಜನಗೂಡು ತಾಲೂಕು ಹೆಡತಲೆ ಗ್ರಾಮದ ಚೈತ್ರ ಎಂಬಾಕೆಯೇ ಪ್ರೀತಿಸಿ ಮದುವೆಯಾದ ಯುವತಿ. ಹೆಡತಲೆ ಗ್ರಾಮದ ಚೈತ್ರ ಹಾಗೂ ಹಲ್ಲರೆ ಗ್ರಾಮದ ಮಹೇಂದ್ರ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಡಿಸೆಂಬರ್ 8 ರಂದು ಮದುವೆ ಆಗಿದ್ದು, ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳಲು ಬಂದಿದ್ದರು. ನೋಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಚೈತ್ರ ತಂದೆ ಬಸವರಾಜ ನಾಯ್ಕ  ಎದುರಿಗೆ ಬಂದು ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತುಹಾಕಿ ಜುಟ್ಟು ಹಿಡಿದು ಎಳೆದು  ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ಮದುವೆಗೆ ಪೋಷಕರ ವಿರೋಧ ಇದೆ, ಜೊತೆಗೆ ಬೆದರಿಕೆಯೂ ಇದೆ ಎಂದು ಪ್ರಿಯತಮನನ್ನ ತಬ್ಬಿಹಿಡಿದ ಚೈತ್ರ ಆತಂಕ ವ್ಯಕ್ತಪಡಿಸಿದ್ದು, ತನ್ನ ತಂದೆಯಿಂದ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಗೆ ದೂರು   ನೀಡಿದ್ದಾಳೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: