ಮೈಸೂರು

ಇಷೆಮಿಕ್ ಲೆಗ್ ಸಮಸ್ಯೆಯಿದ್ದ ರೋಗಿಗೆ ಸ್ಟೆಮ್ ಸೆಲ್ ಥೆರಪಿ ಮೂಲಕ ಕಾಲು ಉಳಿಸಿದ ಮಣಿಪಾಲ್ ಆಸ್ಪತ್ರೆಯ ವೈದ್ಯರು

ಮೈಸೂರು,ಡಿ.21 : – ಮೊದಲ ಬಾರಿಗೆ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಇಷೆಮಿಕ್ ಲೆಗ್ ತೊಂದರೆಯಿದ್ದ ರೋಗಿಯ ಕಾಲನ್ನು ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡ ಉಳಿಸಿದೆ.

ಈ ಕುರಿತು ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ಮಣಿಪಾಲ್ ಹೃದಯ ರೋಗ ಶಾಸ್ತ್ರ ಸಲಹಾ ತಜ್ಞರಾದ ಡಾ.ಸಿ.ಬಿ.ಕೇಶವಮೂರ್ತಿ ಅವರು ಮಾಹಿತಿ ನೀಡಿ ವಾಸಿಯಾಗದ ಇಷೆಮಿಕ್ ಕಾಲಿನ ಗಾಯಗಳನ್ನು ಹೊಂದಿರುವ ರೋಗಿಗಳ ಚಿಕಿತ್ಸೆಯಲ್ಲಿ ಸ್ಟೆಮ್ ಸೆಲ್  ಥೆರಪಿ ಅಪಾರ ಭರವಸೆಯನ್ನು ಮೂಡಿಸಿದೆಯಲ್ಲದೆ, ಕಾಲುಗಳನ್ನು ಕತ್ತರಿಸುವುದನ್ನು ತಡೆಯಲು ನೆರವಾಗಲಿದೆ ಎಂದರು. 88 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ಎಡಕಾಲಿನ ಹಿಮ್ಮಡಿ ಕಪ್ಪಾಗಿರುವ ತೊಂದರೆಯೊಂದಿಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಬಂದಿದ್ದರು. ಅವರು ಮಧುಮೇಹ ರೋಗಿಯಾಗಿದ್ದು, ಅದಕ್ಕಾಗಿ ನಿಗದಿತ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಪ್ರಸ್ತುತ ಸಮಸ್ಯೆಗಾಗಿ ಅವರು ಹಲವಾರು ಔಷಧಗಳನ್ನು ಸ್ವೀಕರಿಸಿದ್ದರು. ಇದರಲ್ಲಿ ಇಂಟ್ರಾವೀನಸ್ ಆ್ಯಂಟಿಬಯೋಟಿಕ್ಸ್ ಸೇರಿದ್ದರೂ ಬಹಳ ಕಡಿಮೆ ಸುಧಾರಣೆ ಕಂಡು ಬಂದಿತ್ತು.  ಪರೀಕ್ಷೆ ನಡೆಸಿದಾಗ ಈ ವ್ಯಕ್ತಿಗೆ ಕ್ರಿಟಿಕಲ್ ಲಿಂಬ್ ಇಷೇಮಿಯಾ(ಸಿ.ಎಲ್.ಐ) ಜೊತೆಗೆ ಎಡಕಾಲಿನ ಹಿಮ್ಮಡಿಯಲ್ಲಿ ಗ್ಯಾಂಗ್ರೀನ್ ಉಂಟಾಗಿರುವುದು ಕಂಡುಬಂದಿತ್ತು. ಈ ರೀತಿಯ ರೋಗಿಗಳಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಕಾಲು ಕತ್ತರಿಸಲಾಗುತ್ತದೆ. ಮೊದಲು ಕಾಲನ್ನು ಉಳಿಸಲು ಪ್ರಯತ್ನ ಕೈಗೊಳ್ಳುವುದು ಇಂತಹ ಪರಿಸ್ಥಿತಿಯಲ್ಲಿ ನಮ್ಮ ಗುರಿಯಾಗಿತ್ತು. ಬೇರೆ ಎಲ್ಲಾ ಚಿಕಿತ್ಸೆಗಳು ವಿಫಲವಾದಾಗ ಕಾಲು ಕತ್ತರಿಸುವುದು ಕೊನೆಯ ಅನಿವಾರ್ಯ ಕ್ರಮವಾಗಿರಬೇಕು.  ಆದರೆ  ಸ್ಟೆಮ್ ಸೆಲ್ ಚಿಕಿತ್ಸೆಯನ್ನು ಮೊದಲ ಬಾರಿಗೆ ಪ್ರಯೋಗಿಸಿ ಹೃದಯ ಭಾಗ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞಾರಾದ ಡಾ. ಉಪೇಂದ್ರ ಶೆಣೈ   ಕಾಲನ್ನು ಉಳಿಸಿದ್ದಾರೆ ಎಂದರು.

ಶಸ್ತ್ರ ಚಿಕಿತ್ಸೆಯ ಒಂದು ವಾರದ ನಂತರ ರೋಗಿಯ ಅನಾನುಕೂಲ ಕಡಿಮೆಯಾಗಿ ಕಾಲಿನ ಚಲನೆಯಲ್ಲಿ ಸುಧಾರಣೆಯಾಗಿದೆ. ಗ್ಯಾಂಗ್ರೀನ್ ಉಂಟಾಗಿದ್ದ ಪ್ರದೇಶ ಗಾತ್ರ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದ್ದು ರೋಗಿಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: