ಮೈಸೂರು

ಕೇಂದ್ರದಿಂದ ಬಿಡುಗಡೆಯಾದ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಿ: ಸಿಎಂಗೆ ಶೋಭಾ ಕರಂದ್ಲಾಜೆ ಸವಾಲು

ಮೈಸೂರು, ಮೇ ೭: ಕೇಂದ್ರದಿಂದ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಅನುದಾನವನ್ನೇ ನೀಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದು, ಯುಪಿಎ ಅಧಿಕಾರದಲ್ಲಿದ್ದಾಗ ಬಿಡುಗಡೆಯಾದ ಅನುದಾನ ಹಾಗೂ ಎನ್‌ಡಿಎ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆ ಮಾಡಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದ ಅವರು, ಕಳೆದ ವರ್ಷ ೧೫೪೦ ಕೋಟಿ ಹಾಗೂ ಈ ವರ್ಷ ೧೭೨೦ ಕೋಟಿ ಅನುದಾನ ಬರ ಪರಿಹಾರಕ್ಕೆ ಕೇಂದ್ರದಿಂದ ಬಿಡುಗಡೆಯಾಗಿದೆ. ಇದನ್ನು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆಯಾದ ಅನುದಾನವನ್ನೆಲ್ಲಾ ಬ್ಯಾಂಕ್ ಖಾತೆಗೆ ಹಾಕಿ ಕೇಂದ್ರಕ್ಕೆ ಬಳಕೆ ಮಾಡಿzವೆ ಎಂದು ನಕಲಿ ಯುಸಿ ಸರ್ಟಿಫಿಕೇಟ್ ನೀಡಿದ್ದಾರೆ. ಅನುದಾನವನ್ನು ಪ್ರಾಮಾಣಿಕವಾಗಿ ರೈತರ ಖಾತೆಗೆ ತಲುಪಿಸದೆ ವಂಚಿಸಿದ್ದಾರೆ. ಕೇಂದ್ರದ ೧೦೦೦ ಕೋಟಿ ಅನುದಾನ ಬಳಕೆಯಾಗದೆ ಬ್ಯಾಂಕಿನಲ್ಲೇ ಇದೆ. ರಾಜ್ಯದಲ್ಲಿ ಕಳೆದ ೪೦ವರ್ಷಗಳಲ್ಲೇ ಇರದ ಭೀಕರ ಬರ ಈ ಬಾರಿ ತಲೆದೋರಿದೆ. ಆದರೂ ಮುಖ್ಯಮಂತ್ರಿಗಳು ಆಕಾಶದಿಂದ ಕೆಳಗಿಳಿಯುತ್ತಲೇ ಇಲ್ಲ. ಮೊದಲು ಆಕಾಶದಲ್ಲಿ ಹಾರಾಡುವುದನ್ನು ಬಿಟ್ಟು ರಸ್ತೆಯಲ್ಲಿ ಓಡಾಡಿ. ಜನರ ಕಷ್ಟಗಳನ್ನು ಅರಿತು ಬಗೆಹರಿಸಿ ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವೇಳೆ ನೀಡಿದ್ದ ದೇಶದ ರಕ್ಷಣೆ, ಅಭಿವೃದ್ಧಿ ಹಾಗೂ ಭ್ರಷ್ಟಾಚಾರರಹಿತ ಆಡಳಿತ ಭರವಸೆಯನ್ನು ಈಡೇರಿಸಿದೆ. ಉಜ್ವಲ ಸ್ಕೀಂ ಜಾರಿ ಮಾಡಲು ಪೂರ್ವ ತಯಾರಿ ನಡೆಸುತ್ತಿದೆ. ಗ್ಯಾಸ್ ಸಂಪರ್ಕ ಇಲ್ಲದ ಬಿಪಿಎಲ್ ಕುಟುಂಬಗಳಿಗೆ ಸಂಪರ್ಕ ನೀಡಲು ಪಟ್ಟಿ ಸಿದ್ದಮಾಡಲಾಗುತ್ತಿದೆ. ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಮೇ ೧೮ರಂದು ತುಮಕೂರಿನಲ್ಲಿ ರಾಜ್ಯ ಪ್ರವಾಸ ಆರಂಭಿಸಲಿದ್ದು, ಎಲ್ಲಾ ೩೬ಜಿಲ್ಲೆಗಳಲ್ಲು ಪ್ರವಾಸ ಮಾಡಲಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ ಬರಗಾಲ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಿದ್ದು ಪಕ್ಷದ ಆಂತರಿಕ ಭಿನ್ನಮತ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಪ್ರಮುಖ್ ಸೀತಾರಾಮ್, ಜಿಲ್ಲಾ ಮಾಧ್ಯಮ್ ಪ್ರಮುಖ್ ಪ್ರಭಾಕರ್ ಶಿಂಧೆ, ಬೋರೇಗೌಡ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: