ಮೈಸೂರು

ಮೊಬೈಲ್ ಬಳಕೆಗಿಂತ ಗ್ರಂಥಾಲಯದ ಬಳಕೆ ವಿದ್ಯಾರ್ಥಿಗಳಿಗೆ ಮುಖ್ಯ : ಡಾ. ಹೇಮಚಂದ್ರ

ಮೈಸೂರು, ಡಿ.30:- ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಎ. ಮತ್ತು ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯರಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹ ಪ್ರಾಧ್ಯಾಪಕರು, ಮೈಸೂರು ಕಾಲೇಜು ಶಿಕ್ಷಣ ಇಲಾಖೆಯ ಎನ್‍ಇಪಿ ಅನುಷ್ಠಾನ ಅಧಿಕಾರಿಗಳಾದ ಡಾ. ಹೇಮಚಂದ್ರ ಅವರು, ಮಾತನಾಡಿ “ಶೈಕ್ಷಣಿಕ ಶಕ್ತಿಯ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೂ ಇರಬೇಕು. ಪದವಿ ವಿದ್ಯಾರ್ಥಿ ಜೀವನ ಗಾಂಭಿರ್ಯಯುತವಾಗಿರಬೇಕು. ಬಡತನದಲ್ಲಿ ಹುಟ್ಟುವುದು ತಪ್ಪಲ್ಲ. ಆದರೆ ಬಡತನದಲ್ಲಿ ಸಾಯುವುದು ನಮ್ಮ ಪ್ರಯತ್ನಹೀನ ಜೀವನ ಶೈಲಿಯನ್ನು ತೋರಿಸುತ್ತದೆ. ಮೊಬೈಲ್ ಬಳಕೆಯನ್ನು ಹೆಚ್ಚಾಗಿ ಮಾಡುವುದರಿಂದ ಸಮಯ ವ್ಯರ್ಥವಾಗುತ್ತದೆ, ಕುಟುಂಬದೊಳಗಿನ ಸಂಬಂಧ, ಮಕ್ಕಳ ಬಾಲ್ಯವನ್ನು ನಾಶಗೊಳಿಸುತ್ತದೆ. ಯೋಚನಾ ಲಹರಿಯನ್ನು ಬದಲಿಸುತ್ತದೆ. ಹೀಗಾಗಿ ಮೊಬೈಲ್ ಬಳಕೆಯನ್ನು ಸೀಮಿತವಾಗಿ ಉಪಯೋಗಿಸಬೇಕು.
“ಉತ್ತಮ ವಿದ್ಯಾರ್ಹತೆ ಪಡೆದರೆ ಉತ್ತಮ ಕೆಲಸ ಪಡೆಯಲು ಸಾಧ್ಯ. ಆದ್ದರಿಂದ ಮೊಬೈಲ್ ಬಳಕೆಗಿಂತ ಗ್ರಂಥಾಲಯದ ಬಳಕೆ ಹೆಚ್ಚಾಗಿ ಮಾಡಬೇಕು. ಆಗ ಜ್ಞಾನಾರ್ಜನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನದ ಬಳಕೆಯನ್ನು ಹಿತ-ಮಿತವಾಗಿ ಮಾಡಬೇಕು. ನಮ್ಮ ಯೋಚನಾ ಲಹರಿಯ ಮೇಲೆ ನಮ್ಮ ಬದುಕು ನಿರ್ಧಾರವಾಗುತ್ತದೆ. ಮಾತು ಕಡಿಮೆಯಿದ್ದು ಕಲಿಯುವಿಕೆ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕು. ವಿದ್ಯಾರ್ಥಿಗಳಲ್ಲಿ ಮಾನಸಿಕ ಸದೃಢತೆ ಇರಬೇಕು, ವ್ಯಕ್ತಿಯಲ್ಲಿ ವ್ಯಕ್ತಿತ್ವ ಮುಖ್ಯ. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವಿರಬೇಕು. ಸಮಯ ವ್ಯರ್ಥ ಮಾಡಿದರೆ ಜೀವನವೇ ವ್ಯರ್ಥವಾದಂತೆ” ಎಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಯನ್ನು ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಎಂ. ಶಾರದ ವಹಿಸಿದ್ದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಡಾ. ಜಿ. ಪ್ರಸಾದಮೂರ್ತಿ ಹಾಗೂ ಡಾ. ಎನ್.ಜಿ. ಲೋಕೇಶ್. ಮುಖ್ಯಸ್ಥರು, ವಾಣಿಜ್ಯ ವಿಭಾಗ, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮೈಸೂರು ಇವರು ಉಪಸ್ಥಿತರಿದ್ದರು.
ಕುಸುಮ ಮತ್ತು ಕೃತಿಕ ಬಿ., ಪ್ರಾರ್ಥಿಸಿದರೆ, ಸುಚಿತ್ರ ಆರ್. ಸ್ವಾಗತಿಸಿದರು. ಸುಮ ನಿರೂಪಿಸಿದರೆ, ಸುಮತಿ ಎಲ್ಲರಿಗೂ ವಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: