ಪ್ರಮುಖ ಸುದ್ದಿಮೈಸೂರು

ಪೋಡಿ ಮುಕ್ತ ಗ್ರಾಮ ಅಭಿಯಾನದಲ್ಲಿ ಉಚಿತ ಆರ್.ಟಿ.ಸಿ ವಿತರಣೆ; ಗ್ರಾಮಸ್ಥರಿಗೆ ಸುವರ್ಣಾವಕಾಶ

ಮೈಸೂರು (ಪ್ರಮುಖ ಸುದ್ದಿ) ಮೇ 7 : ಮೈಸೂರು ಜಿಲ್ಲೆಯಲ್ಲಿ ಮೈಸೂರು ತಾಲ್ಲೂಕನ್ನು ಹೊರತುಪಡಿಸಿ ಉಳಿದ 6 ತಾಲ್ಲೂಕುಗಳಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಈ ಯೋಜನೆಯಲ್ಲಿ ಭೂ ಮಂಜೂರಾತಿ, ಭೂ ಸುಧಾರಣೆ, ಪ್ರಕರಣಗಳನ್ನು ಹೊರತುಪಡಿಸಿ ಹಿಡುವಳಿ ಜಮೀನಿಗೆ ಸಂಬಂಧಪಟ್ಟಂತೆ ರೈತರಿಂದ ಅರ್ಜಿ ಪಡೆಯದೇ ಅಳತೆ ಶುಲ್ಕವಿಲ್ಲದೆ ಬಹು ಮಾಲೀಕತ್ವವುಳ್ಳ ಪಹಣಿದಾರರ ಜಮೀನನ್ನು ಅವರವರ ಹಕ್ಕಿನ ವಿಸ್ತ್ರೀರ್ಣಕ್ಕೆ ಅನುಸಾರವಾಗಿ ಅಳತೆ ಮಾಡಿ ಹದ್ದುಬಸ್ತು ಗಡಿ ನಿಗದಿಪಡಿಸಿ ಪೋಡಿ ಕೆಲಸ ಹಾಗೂ ದುರಸ್ತಿ ಕೆಲಸವನ್ನು ಪೂರೈಸಿ ಪೋಡಿ ದುರಸ್ತಿ ನಂತರ ಪ್ರತಿಯೊಂದು ಹಿಸ್ಸೆಗೂ ಭೂಮಿ ಶಾಖೆಯಿಂದ ಪೋಡಿಗನುಗುಣವಾಗಿ ಪ್ರತ್ಯೇಕ ಆರ್.ಟಿ.ಸಿ.ಗಳನ್ನು ತಯಾರಿಸಿ ಪೋಡಿ, ಅಟ್ಲಾಸ್ ಹಾಗೂ ಆರ್.ಟಿ.ಸಿ. ಪ್ರತಿಯನ್ನು ಸಂಬಂಧಪಟ್ಟ ಹಿಡುವಳಿದಾರರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಗ್ರಾಮಗಳ ಅಳತೆ ಮತ್ತು ದುರಸ್ತಿ ಕೆಲಸ ಮುಕ್ತಾಯಗೊಳಿಸಿ 85 ಗ್ರಾಮಗಳಲ್ಲಿ ಸುಮಾರು 35,566 ಬ್ಲಾಕ್‍ಗಳನ್ನು ಆರ್.ಟಿ.ಸಿ.ಯನ್ನು ಗಣಕೀಕರಣಗೊಳಿಸಲಾಗಿದೆ.

ಹದ್ದುಬಸ್ತು ಅಳತೆ ಆಂದೋಲನವನ್ನು ಏಪ್ರಿಲ್ 2017ರಿಂದ ಪ್ರಾರಂಭಿಸಲಾಗಿದ್ದು, ಅರ್ಜಿ ಸ್ವೀಕರಿಸಿದ ಆದ್ಯತೆ ಮೇರೆಗೆ ಅಳತೆ ಮಾಡಿ ವಿಲೇಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 5485 ಹದ್ದುಬಸ್ತು ಅರ್ಜಿಗಳಿದ್ದು, ಅರ್ಜಿಗಳನ್ನು ಹೋಬಳಿವಾರು ವಿಲೇಗೊಳಿಸಲು 42 ಮಂದಿ ಸರ್ಕಾರಿ ಭೂಮಾಪಕರನ್ನು ಬಳಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ.

ಕಳೆದ 6 ತಿಂಗಳಲ್ಲಿ ಸರ್ಕಾರಿ ಭೂಮಾಪಕರು ನಿರ್ವಹಿಸುವ ಹದ್ದುಬಸ್ತು, ಈ ಸ್ವತ್ತು ಇತರೆ ವಿಷಯಕ್ಕೆ ಸಂಬಂಧಪಟ್ಟ ಒಟ್ಟು 9,499 ಅರ್ಜಿಗಳು ಸ್ವೀಕೃತಿಯಾಗಿದ್ದು, ಒಟ್ಟು 49 ಭೂಮಾಪಕರು ಕೆಲಸ ನಿರ್ವಹಿಸಿ 7033 ಪ್ರಕರಣಗಳನ್ನು ವಿಲೇಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 124 ಜನ ಪರವಾನಗಿ ಭೂಮಾಪಕರು ಮೋಜಿಣಿ ತಂತ್ರಾಂಶದಡಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ 6 ತಿಂಗಳಲ್ಲಿ 8,788 ಅರ್ಜಿ ಸ್ವೀಕರಿಸಿದ್ದು, ಹಿಂದೆ ಬಾಕಿ ಇದ್ದ ಅರ್ಜಿಗಳನ್ನು ಸೇರಿ ಒಟ್ಟಾರೆಯಾಗಿ 11,617 ಅರ್ಜಿಗಳನ್ನು ವಿಲೇಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಹೊಸ ಕಂದಾಯ ಗ್ರಾಮ ರಚನೆ ಕೆಲಸ, ಪೋಡಿ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮದ ಕೆಲಸ, ಭೂಸ್ವಾಧೀನ ಸಂಬಂಧಿತ ಜಂಟಿ ಅಳತೆ ಕೆಲಸಗಳನ್ನು ಭೂಮಾಪಕರು ಮಾಡುತ್ತಿದ್ದಾರೆ. ಈಗಾಗಲೇ ಹೊಸ ಕಂದಾಯ ಗ್ರಾಮ ರಚನೆಯ ಅಡಿ 10 ಗ್ರಾಮಗಳ ರಚನೆಗೆ ಸರ್ಕಾರದಿಂದ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.

ಪೋಡಿ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮದಡಿ ಒಟ್ಟು 106 ಗ್ರಾಮಗಳಲ್ಲಿ ಪೋಡಿ ಮುಕ್ತ ಅಳತೆ ಕೆಲಸ ಪೂರ್ಣಗೊಂಡಿದೆ. ಹಂತ ಹಂತವಾಗಿ ಉಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವುದು ಭೂ ಮಾಪನ ಇಲಾಖೆ ಉದ್ದೇಶವಾಗಿದೆ.

– ಎನ್.ಬಿ.ಎನ್.

Leave a Reply

comments

Related Articles

error: