ಮೈಸೂರು

ಬೋಗಾದಿ ರಿಂಗ್ ರಸ್ತೆ ಬಳಿ ವೃಥಾ ಪೋಲಾಗುತ್ತಿದೆ ನೀರು : ವಿಷಯ ತಿಳಿಸಿದರೂ ಸ್ಥಳಕ್ಕೆ ಬರಲಿಲ್ಲ ಒಬ್ಬರೂ!

ಮೈಸೂರು,ಮೇ.7:-  ನಿಮ್ಮ ಮನೆಯಲ್ಲಿ ಇವತ್ತು ನೀರು ಬಂತಾ, ಬಂದಿಲ್ವಾ ಅಂತ ಅಕ್ಕಪಕ್ಕದವರನ್ನು ವಿಚಾರಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.  ಯಾಕೆಂದರೆ ಈ ಬಾರಿ ಮಳೆಯಿಲ್ಲದೇ ಕುಡಿಯುವ ನೀರಿಗೂ ಬರ ಬಂದಿದ್ದು ಜನತೆ ಸಂಕಷ್ಟ ಎದುರಿಸುವಂತಾಗಿದೆ. ಆದರೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯ ಬಳಿಯಿರುವ ಕುಡಿಯುವ ನೀರು ಸರಬರಾಜು ವಾಲ್ ನಲ್ಲಿ ನೀರು ಅವ್ಯಾಹತವಾಗಿ ಸುರಿಯುತ್ತಿದ್ದು, ಸಾರ್ವಜನಿಕರು ಸಂಬಂಧಪಟ್ಟವರ ಗಮನಕ್ಕೆ ತಂದರೂ ತಮಗೇನೂ ಸಂಬಂಧವಿಲ್ಲದವರಂತೆ ಇರುವುದು ಮಾತ್ರ ವಿಪರ್ಯಾಸ.

ಈ ಜಾಗದಲ್ಲಿ ಸುಮಾರು 50ಕ್ಕೂ ಅಧಿಕ ಲೀಟರ್ ನಷ್ಟು ನೀರು ವೃಥಾ ಹರಿದು ಹೋಗುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಹಲವು ಕಡೆ ಪಾಲಿಕೆ 3-4 ದಿನಗಳಿಗೊಮ್ಮೆ ನೀರು ಬಿಟ್ಟರೂ ಬಿಟ್ಟೀತು. ಇಲ್ಲದಿದ್ದರೆ ಇಲ್ಲ. ಅವರು ಕುಡಿಯುವ ನೀರಿಗಾಗಿ ಟ್ಯಾಂಕರ್ ಮೊರೆ ಹೋಗಬೇಕು. ದುಪ್ಪಟ್ಟು ಹಣ ತೆರಬೇಕು. ಇಲ್ಲಿ ನೀರು ಬಿಲ್ಲು ಬರೋದು ಬರುತ್ತಲೇ ಇರುತ್ತದೆ. ನೀರಿನ ಹನಿಯನ್ನೂ ಹಾಳು ಮಾಡಬೇಡಿ, ಹನಿ ನೀರೂ ಅತ್ಯಮೂಲ್ಯ ಎಂದು  ಇನ್ನೊಬ್ಬರಿಗೆ ತಿಳಿ ಹೇಳುವ ಅಧಿಕಾರಿಗಳಿಗೆ ನೀರು ವೃಥಾ ಪೋಲಾಗುತ್ತಿದೆ ನೀರನ್ನು ಉಳಿಸಿಕೊಡಿ ಎಂದು ಸಾರ್ವಜನಿಕರು ಸ್ಥಳಕ್ಕೆ ತೆರಳಿ ಹೇಳಿದರೂ ಯಾಕೆ ಅರ್ಥವಾಗುವುದಿಲ್ಲ ಎಂಬುದೇ ಪ್ರಶ್ನೆಯಾಗಿದೆ. ವಾಣಿವಿಲಾಸ ನೀರು ಸರಬರಾಜು ಘಟಕ, ಹಾಗೂ ಮಹಾನಗರಪಾಲಿಕೆಯ ಅಧಿಕಾರಿಗಳಿಗೂ ಇಲ್ಲಿ ಬೆಳಿಗ್ಗೆಯಿಂದ ನೀರು ವೃಥಾ ಹಾಳಾಗುತ್ತಿದೆ ದುರಸ್ತಿಗೊಳಿಸಿ ಎಂದು ಹೇಳಿದರೂ ಜಾಣ ಕಿವುಡು, ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನಾದರೂ ಎಚ್ಚೆತ್ತು ನೀರು ಪೋಲಾಗುವುದನ್ನು ತಡೆದು, ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು ಒದಗಿಸಿಯಾರೇ ಎಂಬುದನ್ನು ಕಾದು ನೋಡಬೇಕಿದೆ. – (ವರದಿ; ಕೆ.ಎಸ್,ಎಸ್.ಎಚ್)

Leave a Reply

comments

Related Articles

error: