
ದೇಶಪ್ರಮುಖ ಸುದ್ದಿಮನರಂಜನೆ
ಹಿಂದಿ ಕಿರುತೆರೆ ನಟ ನಕುಲ್ ಮೆಹ್ತಾ ಹನ್ನೊಂದು ತಿಂಗಳ ಮಗುವಿಗೆ ಕೋವಿಡ್ ಪಾಸಿಟಿವ್
ದೇಶ(ಮುಂಬೈ),ಜ.4:- ಹಿಂದಿ ಕಿರುತೆರೆ ನಟ ನಕುಲ್ ಮೆಹ್ತಾ ಮತ್ತು ಜಾಂಕಿ ಪರೇಖ್ ಅವರ ಹನ್ನೊಂದು ತಿಂಗಳ ಮಗುವಿಗೆ ಕೊರೋನಾ ಸೋಂಕು ತಗುಲಿದೆ.
2 ವಾರಗಳ ಹಿಂದೆ ನಕುಲ್ ಮೆಹ್ತಾ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು, ನಂತರ ಜಾಂಕಿ ಪರೇಖ್ ಅವರಿಗೆ ಕೊರೋನಾ ದೃಢಪಟ್ಟಿತ್ತು. ಇದೀಗ ಅವರ 11 ತಿಂಗಳ ಮಗ ಸೂಫಿ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಜಾಂಕಿ ಪರೇಖ್ ತನ್ನ ಇತ್ತೀಚಿನ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಈ ಕೆಟ್ಟ ಮತ್ತು ಕಷ್ಟದ ಸಮಯದ ಕುರಿತು ಎಲ್ಲರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಜಾಂಕಿ ಪರೇಖ್ ತನ್ನ ಇನ್ ಸ್ಟಾ ಪೋಸ್ಟ್ ನಲ್ಲಿ 11 ತಿಂಗಳ ಮಗು ಸೂಫಿಯ ಜ್ವರ ಹೇಗೆ ಹೆಚ್ಚಾಯಿತು ಎಂದು ಹೇಳಿದ್ದಾರೆ. ನಿಧಾನವಾಗಿ ಸೂಫಿಯ ಆರೋಗ್ಯ ಹದಗೆಡತೊಡಗಿತು. ತದನಂತರ ಸೂಫಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ರಕ್ತ ಪರೀಕ್ಷೆಗಳು, ಆರ್ ಟಿಪಿಸಿಆರ್ ತಪಾಸಣೆ ನಡೆಸಲಾಯಿತು. ಜ್ವರ ಕಡಿಮೆ ಮಾಡಲು ಚುಚ್ಚುಮದ್ದುಗಳನ್ನು ಸೂಫಿಗೆ ನೀಡಲಾಯಿತು ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನ ಕೊನೆಯಲ್ಲಿ, ಜಾಂಕಿ ಪರೇಖ್ ಅವರು ತಮ್ಮ ಮಕ್ಕಳನ್ನು ಈ ಸಮಯದಲ್ಲಿ ಮನೆಯಿಂದ ಹೊರಗೆ ಬಿಡಬೇಡಿ ಎಂದು ಎಲ್ಲಾ ಪೋಷಕರನ್ನು ವಿನಂತಿಸಿದ್ದಾರೆ. ಏಕೆಂದರೆ ಮಕ್ಕಳಿಗೆ ಲಸಿಕೆ ಹಾಕಿಲ್ಲ. ಚಿಕ್ಕ ಮಕ್ಕಳು ಮಾಸ್ಕ್ ಧರಿಸಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಮನೆಯಿಂದ ಹೊರಬಂದರೆ ತುಂಬಾ ಕಷ್ಟವಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)