ಕರ್ನಾಟಕಪ್ರಮುಖ ಸುದ್ದಿ
ಸ್ವಾರ್ಥದ ರಾಜಕೀಯ, ಅಧಿಕಾರದ ಹಪಾಹಪಿತನಕ್ಕೆ ಕಾಂಗ್ರೆಸ್ ಪಾದಯಾತ್ರೆ: ಎಮ್.ಜೆ.ಮಹೇಶ್ ಟೀಕೆ
ರಾಜ್ಯ(ಬೆಂಗಳೂರು),ಜ.21:- ಕಾಂಗ್ರೆಸ್ ಗೆ ಮತ್ತು ಅದರ ನಾಯಕರಿಗೆ ಒಂದು ಕ್ಯಾರೆಕ್ಟರ್ ಇಲ್ಲ. ಸ್ವಾರ್ಥದ ರಾಜಕೀಯ, ಅಧಿಕಾರದ ಹಪಾಹಪಿತನಕ್ಕೆ ಮೇಕೆದಾಟು ಪಾದಯಾತ್ರೆ ನಡೆದಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾದ ಎಮ್.ಜಿ. ಮಹೇಶ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ಒಪ್ಪಿಗೆ ಸಿಕ್ಕಿದ ಬಳಿಕ ಮೇಕೆದಾಟು ವಿಚಾರದಲ್ಲಿ ವಿಳಂಬ ಮಾಡುವುದಿಲ್ಲ. ನಿಜಲಿಂಗಪ್ಪ ಅವರ ಕಾಲದಿಂದ ಪ್ರಾರಂಭಿಸಿದ ಯೋಜನೆ ಇಲ್ಲಿವರೆಗೆ ಯಾಕೆ ಬಂತು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಬೇಕಲ್ಲವೇ? 4 ದಶಕಗಳ ಕಾಲ ರಾಜಕಾರಣ ಮಾಡಿದ ಡಿ.ಕೆ.ಶಿವಕುಮಾರ್ ಅವರ ಪ್ರಮುಖ ಹೆಜ್ಜೆ ಗುರುತುಗಳು ಏನು ಎಂದು ಪ್ರಶ್ನಿಸಿದರು. ಬಂಡೆ ನುಂಗೋದು, ಗುಡ್ಡೆ ನುಂಗೋದು, ಗೋಮಾಳ ನುಂಗೋದೇ ಶಿವಕುಮಾರ್ ಅವರ ಸಾಧನೆ ಎಂದು ಆರೋಪಿಸಿದರು. ಮೇಕೆದಾಟು ಯೋಜನೆ ವಿಳಂಬದಿಂದ ಯೋಜನಾ ವೆಚ್ಚ 5 ಸಾವಿರ ಕೋಟಿಯಿಂದ 10 ಸಾವಿರ ಕೋಟಿಗೆ ಏರಿದೆ ಎಂದರು.
ದೆಹಲಿಗೆ ಹಿಮಾಚಲಪ್ರದೇಶದಿಂದ ಕುಡಿಯುವ ನೀರು ಸರಬರಾಜು ಮಾಡುವ 55 ವರ್ಷಗಳ ಕಾಲ ಕಾಂಗ್ರೆಸ್ನಿಂದಾಗಿ ನೆನೆಗುದಿಗೆ ಬಿದ್ದ ರೇಣುಕುಂಜ್ ಯೋಜನೆಯನ್ನು ನರೇಂದ್ರ ಮೋದಿ ಅವರು ಆರು ತಿಂಗಳ ಹಿಂದೆ ಪೂರ್ಣಗೊಳಿಸಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅಸ್ಸಾಂನಲ್ಲಿ ಬಿಗಾನೆಲ್ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದು, ಅದನ್ನು 2019ರಲ್ಲಿ ಬಿಜೆಪಿ ಕೇಂದ್ರ ಸರಕಾರ ಪೂರ್ಣಗೊಳಿಸಿದೆ. ನುಡಿದಂತೆ ನಡೆಯುವ ಸರಕಾರ ನಮ್ಮದು ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ್ದು ಕೇವಲ ಶಂಕುಸ್ಥಾಪನೆಯ ಸರಕಾರವಾಗಿತ್ತು. 1500ಕ್ಕೂ ಹೆಚ್ಚು ಯೋಜನೆಗಳು ಹಾಗೇ ಉಳಿದಿದ್ದವು. ಅಂಥ ಯೋಜನೆಗಳನ್ನು ಪೂರ್ಣಗೊಳಿಸಲು 14 ಲಕ್ಷ ಕೋಟಿ ರೂಪಾಯಿ ಹೂಡುವ ನಿರ್ಧಾರವನ್ನು ನರೇಂದ್ರ ಮೋದಿ ಅವರು ಜಾರಿಗೊಳಿಸಿದರು ಎಂದು ವಿವರಿಸಿದರು.
ಕೀಳು ಮಟ್ಟದ ಭಾಷೆ ಬಳಸುವುದು ರಾಜಕೀಯ ಸಂಸ್ಕೃತಿಯೇ? ಕೊತ್ವಾಲ್ ರಾಮಚಂದ್ರನ ಗುರುಕುಲದಲ್ಲಿ ಕಲಿತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕೇಳಿದರು. ಕಾಂಗ್ರೆಸ್ ನಾಟಕವನ್ನು ದೇಶದ ಜನರು ನೋಡಿದ್ದಾರೆ. ಮೇಕದಾಟುವನ್ನೂ ಬಿಜೆಪಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿವೇಕ್ ರೆಡ್ಡಿ ಅವರು ಮಾತನಾಡಿ, 2007ರಲ್ಲಿ ಮೇಕೆದಾಟು ಯೋಜನೆಗೆ ನದಿ ನೀರು ಹಂಚಿಕೆ ಕುರಿತ ಟ್ರಿಬ್ಯೂನಲ್ ಒಪ್ಪಿಗೆ ನೀಡಿತ್ತು. ಇದನ್ನು ವಿರೋಧಿಸಿ ತಮಿಳುನಾಡು ಸರಕಾರ ಬಲವಾದ ಪ್ರತಿವಾದ ಮಂಡಿಸಿತು. ಮೇಲಿನ ರಾಜ್ಯವಾಗಿ ನಮಗೆ ಅದರ ಮೇಲೆ ನಿಯಂತ್ರಣ ಇದೆ ಎಂದು ಕರ್ನಾಟಕ ವಾದ ಮುಂದಿಟ್ಟಿತು. ಅಣೆಕಟ್ಟು ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿತು. 2013ರಿಂದ 2018ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಡಿಪಿಆರ್ ಸಿದ್ಧಪಡಿಸಲು 5 ವರ್ಷ ತೆಗೆದುಕೊಂಡಿತು ಎಂದು ಆಕ್ಷೇಪಿಸಿದರು.
ಡಿಪಿಆರ್ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲು 2 ವರ್ಷ ಬೇಕಾಯಿತು. 4 ಜಿ ಕ್ಲಿಯರೆನ್ಸ್ಗೆ 2 ವರ್ಷ ಬೇಕಾಯಿತು. ತಂತ್ರಜ್ಞಾನ ಕಂಪೆನಿ ಆಯ್ಕೆಗೆ 3 ವರ್ಷ ಬೇಕಾಯಿತು. ಕಡತಗಳ ಮೇಲೆ ಕುಳಿತು ದೂಳು ಪೇರಿಸುವ ಪರಿಸ್ಥಿತಿಯನ್ನು ಕಾಂಗ್ರೆಸ್ ಆಗಿನ ಸರಕಾರ ನಿರ್ಮಾಣ ಮಾಡಿತ್ತು. ನಮ್ಮ ಸರಕಾರವು ಡಿಪಿಆರ್ ಅನ್ನು ಕೂಡಲೇ ಕೇಂದ್ರಕ್ಕೆ ಸಲ್ಲಿಸಿದೆ. ಡಿ.ಕೆ.ಶಿವಕುಮಾರ್ ಹಿಂದೆ ಪವರ್ ಮಿನಿಸ್ಟರ್ ಆಗಿದ್ದರು. ಆದರೆ, ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದರೇ? ಎಂದು ಕೇಳಿದರು.
ಯೋಜನೆಯನ್ನು ಮುನ್ನೆಲೆಗೆ ತಂದಿದ್ದೇ ಯಡಿಯೂರಪ್ಪ ಮತ್ತು ಬೊಮ್ಮಾಯ ಅವರ ಸರಕಾರ ಎಂದ ಅವರು, 2044-45 ಕ್ಕೆ ಬೆಂಗಳೂರಿಗೆ 63 ಟಿಎಂಸಿ ನೀರು ಬೇಕು. ಯೋಜನೆಗೆ ಅರಣ್ಯ ಇಲಾಖೆ ಒಪ್ಪಿಗೆ ಇದಕ್ಕೆ ಇದೆ. ಆದರೆ, ಕಾಂಗ್ರೆಸ್ ಪುನಶ್ಚೇತನಕ್ಕಾಗಿ ಒಮಿಕ್ರಾನ್ ಸಂದರ್ಭದಲ್ಲೇ ಈ ಪಾದಯಾತ್ರೆ ನಡೆಸಬೇಕಿತೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಯೋಗೇಂದ್ರ ಹೂಡಘಟ್ಟ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. (ಜಿ.ಕೆ,ಎಸ್. ಎಚ್)