ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಶಾಲೆ ಬಂದ್ ಆಗಲ್ಲ, ತೀರಾ ಅನಿವಾರ್ಯವಾದರೆ ಬಂದ್ : ಸಚಿವ ಬಿ.ಸಿ.ನಾಗೇಶ್

ರಾಜ್ಯ(ಬೆಂಗಳೂರು),ಜ.12:- ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದೆ.
ಸಭೆ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕೊರೊನಾ ಕೇಸ್ ಹೆಚ್ಚಾದರೂ ರಾಜ್ಯದಲ್ಲಿ ಶಾಲೆ ಬಂದ್ ಆಗಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಶಾಲೆಗಳ ಬಂದ್ ನಿಂದ ಶಿಕ್ಷಣ ಇಲಾಖೆ ಹಿಂದೆ ಸರಿದಿದೆ. ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಸೋಂಕು ಕಂಡು ಬಂದರೆ. ಎಲ್ಲ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್ ಮಾಡಿಸಿ. ತುಂಬಾ ಗಂಭೀರವಾಗಿದ್ದರೆ ಮಾತ್ರ ಶಾಲೆ ಬಂದ್ ಮಾಡಿ. ಮಕ್ಕಳಿಗೆ ಕಳೆದ ಒಂದೂವರೆ ವರ್ಷಗಳಿಂದ ಸಮರ್ಪಕ ಶಿಕ್ಷಣ ಸಿಕ್ಕಿಲ್ಲ. ನಾವು ಏನೇ ಪರ್ಯಾಯ ಮಾರ್ಗ ಅನುಸರಿಸಿದರೂ ಅಷ್ಟಕಷ್ಟೆ. ಭೌತಿಕ ತರಗತಿಗಳಷ್ಟೇ ಮಕ್ಕಳ ಭವಿಷ್ಯಕ್ಕೆ ಅಡಿಪಾಯ. ಪರ್ಯಾಯ ಮಾರ್ಗ ಪರಿಣಾಮಕಾರಿ ಆಗಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ಶಾಲೆ ಬಂದ್ ಮಾಡುವಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ 2 ಅಲೆಗಳಲ್ಲಿ ಶಾಲಾ ಕಾಲೇಜ್‌ ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಈ ಬಾರಿ ಪಾಸಿಟಿವಿಟಿ ರೇಟ್ ನೋಡಿಕೊಂಡು ಆಯಾ ಜಿಲ್ಲೆ, ತಾಲೂಕು ಮಟ್ಟದ ಶಾಲೆಗಳನ್ನು ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಶಾಲೆ ಬಂದ್ ಆದರೂ, ಆನ್ ಲೈನ್ ಹಾಗೂ ವಿದ್ಯಾಗಮದ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡುವಂತೆ ಸಚಿವರು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಹಾಗೂ ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ವಿಡಿಯೋ ಕಾನ್ಸರೆನ್ಸ್ ಮೂಲಕ ಶಿಕ್ಷಣ ಸಚಿವರು ಮೀಟಿಂಗ್ ನಡೆಸಿದ್ದಾರೆ. ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಡಿಡಿಪಿಐ, ಬಿಇಒಗಳು ಭಾಗಿಯಾಗಿದ್ದು ಸಭೆಯಲ್ಲಿ ರಾಜ್ಯದ ಶಾಲೆಗಳ ಬಂದ್ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

Leave a Reply

comments

Related Articles

error: