ಮೈಸೂರು

ಅವೈಜ್ಞಾನಿಕವಾಗಿ ಅಳವಡಿಸಲಾದ ರೇಲಿಂಗ್ಸ್ : ಹೆಚ್ಚಿನ ಅನಾಹುತಕ್ಕೂ ಮುನ್ನ ಎಚ್ಚೆತ್ತರೆ ಒಳ್ಳೆಯದು

ಮೈಸೂರು, ಮೇ.8:-  ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸಿ ತಾಣವಾಗಿದ್ದು, ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿರುವ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮೈಸೂರಿಗೆ ಬಂದವರು ಆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯದೇ ಹಿಂದಿರುಗಲಾರರು. ತಾಯಿಯ ದರ್ಶನಕ್ಕೆ ಬರುವವ ಮಂದಿ ಇದೀಗ ನೋವನುಭವಿಸುವಂತಾಗಿದೆ.

ತಾಯಿ ಚಾಮುಂಡೇಶ್ವರಿ ದೇವಸ್ಥಾನ ಸದಾ ಭಕ್ತರಿಂದಲೇ ಗಿಜಿಗುಟ್ಟುತ್ತಿರುತ್ತದೆ. ಇಲ್ಲಿಗೆ ಬರುವ ಭಕ್ತರನ್ನು ನಿಯಂತ್ರಿಸಲು ಹರ ಸಾಹಸ ಪಡಬೇಕು. ಸ್ಥಳೀಯರಲ್ಲದೇ, ಬೇರೆ, ಬೇರೆ ರಾಜ್ಯ, ಅಷ್ಟೇ ಯಾಕೆ ವಿದೇಶಗಳಿಂದಲೂ ಇಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಬರುವ ಭಕ್ತರು ಸರತಿಯ ಸಾಲಿನಲ್ಲಿಯೇ ನಿಂತು, ಸರತಿಯ ಸಾಲಿನಲ್ಲಿಯೇ ತೆರಳಿ ದೇವಿಯ ದರ್ಶನವನ್ನು ಪಡೆಯಬೇಕು. ಭಕ್ತರನ್ನು ನಿಯಂತ್ರಿಸಲು ಅಲ್ಲಿ ಕಬ್ಬಿಣದ ರೇಲಿಂಗ್ಸ್ ಗಳನ್ನು ಅಳವಡಿಸಲಾಗಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಅಳವಡಿಸಲಾಗಿಲ್ಲ. ಅವೈಜ್ಞಾನಿಕವಾಗಿ ಅಳವಡಿಸಲಾಗಿದ್ದು, ನಿಂತವರು ಪಕ್ಕದಲ್ಲಿ ಅರಿಯದೇ ಕುತ್ತಿಗೆ ಪಕ್ಕದಲ್ಲಿ ಜರುಗಿಸಿದರೆ ಸೀಳುವಷ್ಟು ಹರಿತವಾಗಿದೆ.

ಶನಿವಾರ ದೇವಳಕ್ಕೆ ದೇವಿ ದರ್ಶನಕ್ಕೆಂದು ಬಂದವರು ತಮ್ಮ ಕತ್ತನ್ನು ಗಾಯಗೊಳಿಸಿಕೊಂಡು ಹೋಗಿದ್ದಾರೆ. ಭಾನುವಾರವೂ ಬಾಲಕಿಯೋರ್ವಳು ಕತ್ತನ್ನು ತಾಗಿಸಿಕೊಂಡ ಪರಿಣಾಮ ರಕ್ತ ಸುರಿಯುವಂತಾಗಿದೆ. ದೇವಿಯ ದರ್ಶನಕ್ಕೆ ಬರುವವರಿಗೆ ನೋವುಂಟಾಗುವಂತೆ ಅವೈಜ್ಞಾನಿಕ ರೀತಿಯಲ್ಲಿ ಇದನ್ನು ಅಳವಡಿಸಿರುವುದು ಎಷ್ಟು ಸರಿ ಎಂಬುದೇ ಪ್ರಶ್ನೆಯಾಗಿದೆ.  ಈ ಅವೈಜ್ಞಾನಿಕ ರೇಲಿಂಗ್ಸ್ ನಿಂದ ಇನ್ನೆಷ್ಟು ಮಂದಿ ಗಾಯಗೊಳ್ಳಬೇಕೋ, ಹೆಚ್ಚಿನ ಅನಾಹುತವಾಗುವುದಕ್ಕೂ ಮುನ್ನ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬಹುದೇ ಎಂಬುದನ್ನು ಕಾದು ನೋಡಬೇಕಿದೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: