ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಮೀಟೂ ಪ್ರಕರಣ : ನಟ ಅರ್ಜುನ್ ಸರ್ಜಾಗೆ ರಿಲೀಫ್

ರಾಜ್ಯ(ಬೆಂಗಳೂರು),ಜ.14 :-  ಭಾರೀ ಬಿರುಗಾಳಿ ಎಬ್ಬಿಸಿದ್ದ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಆರೋಪಿಸಿದ್ದ   ‘ಮೀಟೂ’ ಪ್ರಕರಣಕ್ಕೆ ಸಂಬಂಧಿಸಿದಂತೆ  ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ನ್ಯಾಯಾಲಯ ನಟ ಅರ್ಜುನ್ ಸರ್ಜಾ ಅವರನ್ನು ಆರೋಪ ಮುಕ್ತಗೊಳಿಸಿದೆ.

ಚಿತ್ರವೊಂದರ ಶೂಟಿಂಗ್ ವೇಳೆ ನಟ ಅರ್ಜುನ್ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಶೃತಿ ಆರೋಪಿಸಿದ್ದರು. 2015ರಲ್ಲಿ ನಡೆದಿದ್ದ’ ವಿಸ್ಮಯ’ ಎಂಬ ಹೆಸರಿನ ಚಿತ್ರದ ಶೂಟಿಂಗ್ ವೇಳೆ ರೋಮ್ಯಾಂಟಿಕ್ ಸೀನ್ ರಿಹರ್ಸಲ್ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ನನ್ನ ಖಾಸಗಿ ಅಂಗವನ್ನು ಮುಟ್ಟಿದ್ದರು. ಆಗ ತಾನೇ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದ ನಟಿಯಾಗಿದ್ದರಿಂದ ನಾನು ಏನೂ ಮಾಡದೇ ಸುಮ್ಮನಾದೆ. ಪುನಃ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡು   ಬೆನ್ನಿನ ಹಿಂಭಾಗದಲೆಲ್ಲಾ ಕೈಯಾಡಿಸಿ ನಮ್ಮ ಡೈರೆಕ್ಟರ್ ಬಳಿ ದೃಶ್ಯವನ್ನು ಈ ರೀತಿ ಇನ್ನು ಸುಧಾರಣೆ ಮಾಡಿಕೊಳ್ಳಬಹುದಲ್ಲಾ ಎಂದು ಹೇಳಿದ್ದರು. ಇದು ನನಗೆ ತೀವ್ರ ಮುಜುಗರ ಉಂಟು ಮಾಡಿತ್ತು ಎಂದು ಮೂರು ವರ್ಷಗಳ ಬಳಿಕ ಅವರು ತಮಗಾಗಿರುವ ಅನ್ಯಾಯದ ಕುರಿತು ಅರ್ಜುನ್ ಸರ್ಜಾ ವಿರುದ್ಧ  ಪ್ರಕರಣ ದಾಖಲಿಸಿದ್ದರು.

ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಕೇಸ್ ದಾಖಲಾಗಿ ಇದೀಗ ಮೂರೂವರೆ ವರ್ಷವಾಗಿದೆ. ಇಲ್ಲಿಯವರೆಗೆ ನಟಿಯ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಲ್ಲಾ ರೀತಿಯ ತನಿಖೆ ಮಾಡಿದರೂ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಕುರುಹುಗಳು ಇಲ್ಲ, ಸಾಕ್ಷ್ಯಾಧಾರಗಳೂ ಇಲ್ಲ ಎಂದು ಪೊಲೀಸರು ಕೋರ್ಟ್ ಗೆ ‘ಬಿ ರಿಪೋರ್ಟ್’ ಸಲ್ಲಿಸಿದ್ದರು. ಈ ರಿಪೋರ್ಟ್ ಗೆ ನಟಿ ಕೂಡ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಮೌನಕ್ಕೆ ಜಾರಿದ್ದಾರೆ.

ಇದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು ಸಾಕ್ಷ್ಯಾಧಾರ ಇಲ್ಲದ ಹಿನ್ನಲೆಯಲ್ಲಿ ಹಾಗೂ ಇದಕ್ಕೆ ಆಕ್ಷೇಪಣೆ ಇದ್ದರೆ ಸಲ್ಲಿಸುವಂತೆ ನಟಿಗೆ ನೀಡಿರುವ ನೋಟಿಸ್ ಗೆ ಯಾವುದೇ ಉತ್ತರ ಬಾರದ ಕಾರಣ, ನಟ ಅರ್ಜುನ್ ಸರ್ಜಾ ಅವರನ್ನು ಈ ಆರೋಪದಿಂದ ಮುಕ್ತ ಮಾಡಿ  ಆದೇಶಿಸಿದೆ.(ಎಸ್.ಎಂ)

Leave a Reply

comments

Related Articles

error: