ಮೈಸೂರು

ನಾಗರ ಹೊಳೆಯಲ್ಲಿ ನಾಳೆಯಿಂದ ಹುಲಿ ಗಣತಿ

ಮೈಸೂರು,ಜ.22:- ನಾಗರ ಹೊಳೆ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಐದನೇ ಹುಲಿ ರಾಷ್ಟ್ರೀಯ ಗಣತಿ ಅಂಗವಾಗಿ ನಾಳೆಯಿಂದ ಎರಡು ಹಂತದಲ್ಲಿ ಹುಲಿ ಗಣತಿ ಕಾರ್ಯ ನಡೆಯಲಿದೆ. ಹುಲಿ ಸೇರಿದಂತೆ ಮಾಂಸಾಹಾರಿ ಪ್ರಾಣಿಗಳು ಮತ್ತು ಬೃಹತ್ ಸಸ್ಯಾಹಾರಿ ಪ್ರಾಣಿಗಳ ಗಣತಿ ಆರಂಭವಾಗಲಿದೆ ಎಂದು ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಡಿ.ಮಹೇಶ್ ಕುಮಾರ್ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಪೆನ್ನು ಪೇಪರ್ ಬಳಸದೇ ಎಂ-ಸ್ಟ್ರೈಪ್ಸ್ ಎಕಲಾಜಿಕಲ್ ಆ್ಯಪ್ ಬಳಸಿ ಐದನೇ ರಾಷ್ಟ್ರೀಯ ಹುಲಿ ಗಣತಿ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಕೋವಿಡ್ 19ನಿಂದಾಗಿ ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಬಾರಿಯೂ ಸ್ವಯಂ ಸೇವಕರಿಲ್ಲದೆ ಉದ್ಯಾನವನದ ಹುಣಸೂರು, ವೀರನಹೊಸಳ್ಳಿ, ಆನೆಚೌಕೂರು, ಮೇಟಿಕುಪ್ಪ, ನಾಗರಹೊಳೆ, ಕಳ್ಳಹಳ್ಳ, ಅಂತರಸಂತೆ, ಡಿ.ಕುಪ್ಪೆ ವಲಯಗಳಲ್ಲಿ 300 ಅರಣ್ಯ ಸಿಬ್ಬಂದಿಗಳ ಮೂಲಕವೇ ಗಣತಿ ನಡೆಸಲಾಗುವುದು ಎಂದು ಹುಣಸೂರಿನಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ  ಹುಲಿ ಗಣತಿಗಾಗಿ 2021ಏಪ್ರೀಲ್-ಮೇ ಮಾಹೆನಲ್ಲೇ ಕ್ಯಾಮರಾ ಟ್ರ್ಯಾಪಿಂಗ್ ಮೂಲಕ ಹುಲಿ ಗಣತಿ ನಡೆಸಲಾಗಿದೆ. ಇದೀಗ ಐದನೇ ಹುಲಿ ಗಣತಿಯು ಉದ್ಯಾನವನದಲ್ಲಿ ಜನವರಿ 23ರಿಂದ ಅಂದರೆ ನಾಳೆಯಿಂದ ಫೆಬ್ರವರಿ 7ರವರೆಗೆ ಟ್ರಾನ್ಸಾಕ್ಟ್ ಲೈನ್ ಆಧಾರಿತ ಸಸ್ಯಾಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇದಗಳ ಜೊತೆಗೆ 2019-20ರ ವನ್ಯಜೀವಿ ಸಪ್ತಾಹದ ಧ್ಯೇಯವಾಗಿದ್ದ ರಣಹದ್ದುಗಳ ಸಂರಕ್ಷಣೆಯ ಕುರಿತ ಯೋಜನೆಯಿಂದಾಗಿ ಈ ಬಾರಿಯ ಹುಲಿಗಣತಿ ನಡೆಯುವ ವೇಳೆ ಸಸ್ಯಾಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇದಗಳ ಸಮೀಕ್ಷೆ ಜೊತೆಗೆ ರಣಹದ್ದುಗಳು ಹಾಗೂ ಮಾಂಸಾಹಾರಿ ಪಕ್ಷಿ ಪ್ರಭೇದಗಳ ಮಾಹಿತಿಯನ್ನೂ ಸಂಗ್ರಹಿಸಲಾಗುವುದು ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: