ಕರ್ನಾಟಕದೇಶಮೈಸೂರು

ನೀರು ಬಿಡುಗಡೆ ಅಸಾಧ್ಯ: ಸೋಮವಾರ ಮತ್ತೆ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯಲು ಮಂತ್ರಿಪರಿಷತ್ ಸಭೆ ನಿರ್ಧಾರ

  • ಸರ್ವ ಪಕ್ಷ ಸಭೆ ನಿರ್ಣಯಕ್ಕೆ ಸರ್ಕಾರ ಬದ್ಧ
  • ಮಂತ್ರಿ ಪರಿಷತ್ ‍ಸಭೆ ನಂತರ ಸುದ್ದಿಗೋಷ್ಟಿ ನಡೆಸಿದ ಸಿಎಂ

 

ಬೆಂಗಳೂರು: ಸುಪ್ರೀಂ ಕೋರ್ಟಿನ ಸೆ.30ರ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದು ಅಸಾಧ್ಯ ಎಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆ ನಿರ್ಣಯಿಸಿದೆ. ಜೊತೆಗೆ ಈ ಕುರಿತು ಮತ್ತೆ ನಿರ್ಣಯ ಅಂಗೀಕರಿಸಲು ಸೋಮವಾರ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲು ಸರ್ಕಾರ ನಿರ್ಧರಿಸಿದೆ.

ಶನಿವಾರ (ಅ.1) ನಡೆದ ಸರ್ವಪಕ್ಷ ಸಭೆಯ ನಂತರ ಮಂತ್ರಿಪರಿಷತ್‍ ನಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ನಿಲುವನ್ನು ಪ್ರಕಟಿಸಿದರು.

ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್‍ ಕೇಂದ್ರಸರ್ಕಾರಕ್ಕೆ ನಿರ್ದೇಶನ ಮಾಡಿತ್ತು. ಇದರಂತೆ ನಾವು ಸಭೆಯಲ್ಲಿ ನಮ್ಮ ವಾದ ತಿಳಿಸಿದ್ದೆವು. ಆದರೆ ತಮಿಳುನಾಡು ತನ್ನ ಹಳೇ ನಿಲುವಿಗೆ ಅಂಟಿಕೊಂಡಿದ್ದರ ಪರಿಣಾಮ ಉಮಾ ಭಾರತಿ ಅವರಿಗೆ ಯಾವುದೇ ಸಮನ್ವಯ ಮೂಡಿಸುವುದು ಸಾಧ್ಯವಾಗಲಿಲ್ಲ. ಆದರೆ, ಮತ್ತೆ ನಿನ್ನೆ (ಸೆ.30) ಸುಪ್ರೀಂ ಕೋರ್ಟ್‍ ನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ಆದೇಶಿಸಿದ್ದು, ಇದು ಕರ್ನಾಟಕ ಜಾರಿ ಮಾಡಲು ಸಾಧ್ಯವಿಲ್ಲದ ತೀರ್ಪು.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್‍ ಆದೇಶ ನೀಡಿರುವುದು ಸರಿಯಲ್ಲ. ಇದು ಸುಪ್ರೀಂ ಕೋರ್ಟ್‍ ತನ್ನ ವ್ಯಾಪ್ತಿ ಮೀರಿ ನೀಡಿರುವ ಆದೇಶವಾಗಿದ್ದು, ಅಂತಾರಾಜ್ಯ ವಿವಾದ ತಲೆದೋರಿದಾಗ ಸಾಂವಿಧಾನಿಕ ಪೀಠದ ಆದೇಶವೇ ಪರಮೋಚ್ಚ. ಇದಲ್ಲದೆ ಕರ್ನಾಟಕ ಮತ್ತು ತಮಿಳುನಾಡು ಹೊರತುಪಡಿಸಿ, ಕಾವೇರಿ ನದಿಪಾತ್ರದ ಉಳಿದೆರಡು ರಾಜ್ಯಗಳಾದ ಕೇರಳ ಮತ್ತು ಪುದುಚೆರಿ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‍ ಈ ಬಗ್ಗೆ ನೋಟಿಸ್ ನೀಡಿಲ್ಲದಿರುವುದು ಕಾನೂನಾತ್ಮಕ ಲೋಪ. ತರಾತುರಿಯಲ್ಲಿ ನೀಡಿರುವ ಆದೇಶ ಇದಾಗಿದ್ದು, ಮರುಪರಿಶೀಲನೆಗಾಗಿ ಸರ್ಕಾರ ಇಂದು (ಅ.1) ಅರ್ಜಿ ಸಲ್ಲಿಸಿದೆ.

ಈ ಎಲ್ಲ ಕಾರಣಗಳಿಂದ ಹೀಗಾಗಿ ಇಂದು ನಡೆದ ಸರ್ವಪಕ್ಷಗಳ ಸಭೆಯ ನಿರ್ಣಯಕ್ಕೆ ಬದ್ಧವಾಗಿದ್ದು, ರಾಜ್ಯದ ಹಿತರಕ್ಷಣೆ ಮಾಡಲು ಮಂತ್ರಿಪರಿಷತ್ ಸಭೆಯಲ್ಲಿ ನಿರ್ಧರಿಸಿದ್ದೇವೆ. ಸೋಮವಾರ ಮತ್ತೆ ವಿಧಾನಮಂಡಲ ಅಧಿವೇಶನ ಕರೆದು ನಿರ್ಣಯ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಈ ಕುರಿತು ಮತ್ತೆ ನಿರ್ಣಯ ಅಂಗೀಕರಿಸುವ ಸಲುವಾಗಿ ವಿಧಾನಮಂಡಲದ ವಿಶೇಷ ಅಧಿವೇಶವನ್ನು ಸೋಮವಾರ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Leave a Reply

comments

Related Articles

error: