
ಕರ್ನಾಟಕಪ್ರಮುಖ ಸುದ್ದಿಮನರಂಜನೆ
ಸಾವಿತ್ರಿ ಮೂಲಕ ಹಾರರ್ ಚಿತ್ರಗಳಿಗೆ ಕಾಲಿಟ್ಟ ವಿಜಯ್ ರಾಘವೇಂದ್ರ
ರಾಜ್ಯ(ಬೆಂಗಳೂರು),ಫೆ.01 : ನಟ ವಿಜಯ್ ರಾಘವೇಂದ್ರ ಇದುವರೆಗೂ ಹಾರರ್ ಶೈಲಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡ ಉದಾಹರಣೆ ಇಲ್ಲ. ಇದೀಗ ‘ಸಾವಿತ್ರಿ’ ಚಿತ್ರದ ಮೂಲಕ ಅದೂ ನೆರವೇರಿದೆ.
ಇತ್ತೀಚೆಗಷ್ಟೇ ಈ ಚಿತ್ರದ ಹಾಡುಗಳ ಜೊತೆ ಟ್ರೇಲರ್ ಸಹ ಹೊರಬಂದಿದೆ. ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರಕ್ಕೂ ಸಿನಿಮಾ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಕಿರು ಮಾಹಿತಿ ನೀಡಿರುವ ವಿಜಯ್ ರಾಘವೇಂದ್ರ, ‘ಅಪ್ಪ-ಮಗಳ’ ಬಾಂಧವ್ಯ ಹೇಗಿರಲಿದೆ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಹಾರರ್ ಟಚ್ ಸಹ ಚಿತ್ರಕ್ಕಿದೆ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡಿದ ಸಂತೋಷವಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಾವಿತ್ರಿ ಸಿನಿಮಾದ ಮೂಲಕ ನಟಿ ಊರ್ವಶಿ ರಾಯ್ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಊರ್ವಶಿ ರಾಯ್ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರಿಗಿದು ಕನ್ನಡದಲ್ಲಿ ಮೊದಲ ಸಿನಿಮಾವಾಗಿದೆ, ‘ಒಂದೊಳ್ಳೆಯ ಪಾತ್ರವನ್ನು ನಿರ್ದೇಶಕರು ನೀಡಿದ್ದಾರೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಖುಷಿ ನನಗಿದೆ, ನಾನು ವಿಜಯ್ಗೆ ಜೋಡಿಯಾಗಿದ್ದೇನೆ ಎಂದಷ್ಟೇ ಹೇಳಿದ್ದಾರೆ’.
ಈವರೆಗೂ ಗೀತಸಾಹಿತಿಯಾಗಿ ಗುರುತಿಸಿಕೊಂಡಿದ್ದ ಹೃದಯಶಿವ, ಈ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿಗೆ ಸಂಗೀತ ಮತ್ತು ಹಿನ್ನಲೆ ಸಂಗೀತವನ್ನೂ ಒದಗಿಸಿದ್ದಾರೆ. ಎಸ್.ದಿನೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ ಸೇರಿ ಹಲವರು ನಟಿಸಿದ್ದಾರೆ. ಚಿತ್ರಮಂದಿರಗಳಿಗೆ ಶೇ.100 ಆಸನ ಭರ್ತಿಗೆ ಅವಕಾಶ ನೀಡಿದರೆ, ಬಿಡುಗಡೆ ಮಾಡುತ್ತೇವೆ. ಇಲ್ಲವಾದಲ್ಲಿ ನೇರವಾಗಿ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ ಎಂಬುದು ನಿರ್ಮಾಪಕ ಪ್ರಶಾಂತ್ ಹೀಲಲಿಗೆ ಅವರ ಮಾತು.(ಎಸ್.ಎಂ)