ಪ್ರಮುಖ ಸುದ್ದಿ

ಅಕ್ರಮ ಡೈಯಿಂಗ್ ಘಟಕದ ಮೇಲೆ ದಾಳಿ: ಮಾಲೀಕನಿಗೆ ನೋಟಿಸ್

ಪ್ರಮುಖ ಸುದ್ದಿ, ರಾಮನಗರ ಮೇ 6: ನಗರಸಭೆ ವ್ಯಾಪ್ತಿಯ ಮಂಜುನಾಥನಗರದ ಸಮೀಪ ಅಕ್ರಮವಾಗಿ ನಡೆಯುತ್ತಿದ್ದ ಡೈಯಿಂಗ್ ಕಾರ್ಖಾನೆ ಮೇಲೆ ನಗರಸಭೆ ಅಧ್ಯಕ್ಷ ಪಿ.ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದೆ.

ನಗರದ ಮಂಜುನಾಥನಗರದ ಬೋಳಪ್ಪನ ಕೆರೆ ಬಳಿ ಬಟ್ಟೆಗಳಿಗೆ ಬಣ್ಣ ಹಚ್ಚುವ ಘಟಕವೊಂದು ಅಕ್ರಮವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಡೈಯಿಂಗ್ ಘಟಕದ ಮೇಲೆ ನಗರಸಭಾಧ್ಯಕ್ಷ ಪಿ.ರವಿಕುಮಾರ್ ಮತ್ತು ರಾಮನಗರ ಪ್ರಾದೇಶಿಕ ವಿಭಾಗದ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಿವಣ್ಣ ಎಂಬುವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಈ ಘಟಕ ಸ್ಥಾಪನೆಯಾಗಿದ್ದು, ಕಳೆದ ೬ ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದೆ. ಘಟಕದಿಂದ ಸಂಸ್ಕರಣವಾಗದ ನೀರು ರಾಜಕಾಲುವೆಗೆ ಸೇರುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ನಗರಸಭೆಗೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಲಿಯ ಗಮನ ಸೆಳೆದಿದ್ದರು. ಈ ವೇಳೆ ನಗರಸಭಾಧ್ಯಕ್ಷ ಪಿ.ರವಿಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಭೂ ಮಾಲೀಕರು ಬಾಡಿಗೆಗೆ ನೀಡುವ ಮುನ್ನ ಇಂತಹ ಘಟಕಗಳು ಅಗತ್ಯ ಪರವಾನಿಗೆಗಳನ್ನು ಪಡೆದಿರುವ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು, ಕಾನೂನು ಬಾಹಿರವಾಗಿ ಅಕ್ರಮಗಳನ್ನು ನಡೆಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸಿದ್ದರಾಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಡೈಯಿಂಗ್ ಘಟಕಕ್ಕೆ ಅನುಮತಿ ನೀಡಿಲ್ಲ. ಆದರೂ ಕಾನೂನಿನ ಕಣ್ಣುತಪ್ಪಿಸಿ ಘಟಕಗಳು ಸ್ಥಾಪನೆಯಾಗಿವೆ. ಇಂತಹ ಘಟಕಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ನೋಟಸ್ ಜಾರಿ ಮಾಡಲಾಗುತ್ತಿದೆ, ಅಕ್ರಮ ಘಟಕಗಳಿಗೆ ಭೂಮಿ ಬಾಡಿಗೆ ನೀಡಿದವರ ವಿರುದ್ದವೂ ಕೇಸು ದಾಖಲು ಮಾಡಲಾಗುವುದು ಎಂದು ಅವರು ತಿಳಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಇಂತಹ ಘಟಕಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ತಿಳಿದು ಬಂದಿದೆ. ಇವರಿಗೆ ಕೆಲವು ಅಧಿಕಾರಿಗಳು ಸಹಕಾರ ನೀಡುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ, ಈ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಹಾಗೂ ಬೆಸ್ಕಾಂ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನ ಸೆಳೆಯುವುದಾಗಿ ಅವರು ತಿಳಿಸಿದರು. (ಬಿ.ಎಂ)

 

Leave a Reply

comments

Related Articles

error: