
ದೇಶಪ್ರಮುಖ ಸುದ್ದಿ
ಪ್ರಧಾನಿ ಮೋದಿ ಇಂದು ಹೈದರಾಬಾದ್ ಗೆ ಭೇಟಿ : 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಮೋದಿ
ದೇಶ(ನವದೆಹಲಿ),ಫೆ.5:- 11ನೇ ಶತಮಾನದ ಭಕ್ತಿ ಶಾಖೆಯ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ಇಂದು ಹೈದರಾಬಾದ್ ನಲ್ಲಿ ‘ಸಮಾನತೆಯ’ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅದನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಇದಲ್ಲದೆ ರಾಜ್ಯದ ಪತಂಚೆರುವಿನಲ್ಲಿರುವ ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಸೆಮಿ-ಆರಿಡ್ ಟ್ರಾಪಿಕ್ಸ್ (ICRISAT) ಕ್ಯಾಂಪಸ್ ಗೆ ಭೇಟಿ ನೀಡುವ ಮೂಲಕ ಪ್ರಧಾನ ಮಂತ್ರಿ ಅವರು ಸಂಸ್ಥೆಯ 50 ನೇ ವಾರ್ಷಿಕೋತ್ಸವದ ಆಚರಣೆಯನ್ನು ಉದ್ಘಾಟಿಸಲಿದ್ದಾರೆ.
ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮತ್ತು ಪೊಲೀಸ್ ಮಹಾನಿರ್ದೇಶಕ ಎಂ ಮಹೇಂದರ್ ರೆಡ್ಡಿ ಶುಕ್ರವಾರ ಪ್ರಧಾನಿ ಭೇಟಿಯ ಸಿದ್ಧತೆಗಳ ಪರಿಶೀಲನೆ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಧಾನಿಯವರ ಕಾರ್ಯಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, 216 ಅಡಿ ಎತ್ತರದ ‘ಸಮಾನತೆಯ’ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಯನ್ನು ಭಕ್ತಿ ಶಾಖೆಯ 11 ನೇ ಶತಮಾನದ ಸಂತ ಶ್ರೀ ರಾಮಾನುಜಾಚಾರ್ಯರ ನೆನಪಿಗಾಗಿ ನಿರ್ಮಿಸಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವುಗಳ ಸಂಯೋಜನೆಯಿಂದ ‘ಪಂಚಧಾತು’ದಿಂದ ಮಾಡಲ್ಪಟ್ಟ ಈ ಪ್ರತಿಮೆಯು ವಿಶ್ವದ ಅತಿ ಎತ್ತರದ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ. (ಏಜೆನ್ಸೀಸ್,ಎಸ್.ಎಚ್)