
ಮೈಸೂರು
ಲಾಡು ಮಾರಾಟದಲ್ಲಿ ಗೋಲ್ಮಾಲ್ : ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಬೆಲೆ ಪ್ರಿಂಟ್ ಇಲ್ಲದ ಕವರಿನಲ್ಲಿ ಲಾಡು ಮಾರಾಟ
ಮೈಸೂರು, ಫೆ.8:- ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಾಲಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಾಡು ಪ್ರಸಾದ ಖರೀದಿ ಸಮಯದಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಲಾಡು ಮಾರಾಟ ಮಾಡಲು ಅಧಿಕಾರಿಗಳು ದಾರಿ ಮಾಡಿಕೊಟ್ಟಂತಾಗಿದೆ.
ಶ್ರೀಕಂಠೇಶ್ವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಲಾಡು ಪ್ರಸಾದ ಮಾರಾಟ ಮಾಡುವ ಕೌಂಟರಿನಲ್ಲಿ ಭಕ್ತಾದಿಗಳ ಜೊತೆ ಅನೇಕ ಬಾರಿ ಲಾಡು ಖರೀದಿ ಸಮಯದಲ್ಲಿ ಕಿರಿಕಿರಿ ಉಂಟಾಗಿದೆ. ಕಾರಣ ಕಲ್ಲು ಸಕ್ಕರೆ ಕವರಿನ ಮೇಲೆ 10ರೂ ಅಂತ ಬೆಲೆ ಪ್ರಿಂಟ್ ನಿಗದಿಯಾಗಿದೆ. ಆದರೆ ಲಾಡು ಕವರಿನ ಮೇಲೆ ಬೆಲೆ ಇಲ್ಲದೆ ಇರುವುದನ್ನು ಕಂಡು ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ ಎಂದು ಭಕ್ತಾದಿಗಳು ಮತ್ತು ಮಾರಾಟ ಮಾಡುವವರ ನಡುವೆ ಮಾತಿನ ಚಕಮಕಿ ನಡೆದಿರುವ ಪ್ರಸಂಗಗಳು ಕೆಲವು ಸಮಯದಲ್ಲಿ ಉಂಟಾಗಿದೆ.
ಲಾಡು ಕವರಿನ ಮೇಲೆ ಒಂದು ಲಾಡುವಿಗೆ ನಿಗದಿತ ಬೆಲೆ ಎಷ್ಟು ಅಂತ ಪ್ರಿಂಟ್ ಆಗಿಲ್ಲ. ಇದನ್ನು ನೋಡುತ್ತಿದ್ದರೆ ಅನುಮಾನ ಉಂಟಾಗಿದೆ. ಕಲ್ಲುಸಕ್ಕರೆ ಕವರಿನ ಮೇಲೆ 10 ರೂ ಅಂತ ನಿಗದಿಯಾಗಿದೆ. ಲಾಡು ಕವರಿನ ಮೇಲೆ ಬೆಲೆ ನಿಗದಿಯಾಗಿಲ್ಲ ಕಾರಣ ಏನು ಎಂಬುದೇ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಭಕ್ತಾದಿಗಳು ಖರೀದಿ ಮಾಡುವ ಲಾಡು ಪ್ರಸಾದ ಕವರಿನ ಮೇಲೆ ಒಂದು ಲಾಡುವಿಗೆ ಬೆಲೆ ಎಷ್ಟು ಎಂಬುದನ್ನು ಕವರಿನ ಮೇಲೆ ನಮೂದಿಸಿ ತದನಂತರ ಲಾಡು ಮಾರಾಟ ಮಾಡಬೇಕೆಂಬುದೇ ಭಕ್ತಾದಿಗಳ ಕೋರಿಕೆಯಾಗಿದೆ. (ಕೆ.ಎಸ್,ಎಸ್.ಎಚ್)