ದೇಶಪ್ರಮುಖ ಸುದ್ದಿ

ಉಗ್ರರ ಪಟ್ಟಿಗೆ ಮಸೂದ್‍ ಅಝರ್‍: ಭಾರತದ ಪ್ರಸ್ತಾಪಕ್ಕೆ ಚೀನಾ ತಡೆ

ನವದೆಹಲಿ: ಜೈಶ್-ಇ-ಮೊಹಮ್ಮದ್‍ ಮುಖ್ಯಸ್ಥ ಮಸೂದ್ ಅಝರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿ, ಆತನ ಚಲನವಲನಗಳನ್ನು ನಿರ್ಬಂಧಿಸಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಮಂಡಿಸಿರುವ ನಿರ್ಣಯದ ವಿರುದ್ಧ ಚೀನಾ ಚಲಾಯಿಸಿರುವ ವಿಟೊ ಅವಧಿಯನ್ನು ಮುಂದುವರಿಸಿದೆ. ಇದರಿಂದ ಚೀನಾ ಜೈಶ್ ಇ ಮೊಹಮ್ಮದ್‍ ಉಗ್ರ ಅಜರ್ ಮಸೂದ್‍ನನ್ನು ರಕ್ಷಿಸಲು ಯತ್ನಿಸುತ್ತಿರುವುದು ಮತ್ತೆ ಸಾಬೀತಾಗಿದೆ.

ಪರಸ್ಪರ ವಿಶ್ವಾಸ ಮತ್ತು ನಂಬಿಕೆ ಹೆಚ್ಚಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ದಿನ ಆಚರಿಸಿಕೊಳ್ಳುತ್ತಿರುವ ಚೀನಾಗೆ ಶುಭ ಹಾರೈಸಿದ್ದಾರೆ. ಆದರೆ, ಸಂಸತ್‍ ಮತ್ತು ಪಠಾಣ್‍ಕೋಟ್‍ ದಾಳಿಯ ರೂವಾರಿಯಾಗಿರುವ ಪಾಕಿಸ್ತಾನದ ಮೂಲದ ಜೈಶ್-ಇ-ಮೊಹಮ್ಮದ್‍ ಸಂಘಟನೆಯ ಅಝರ್‍ನನ್ನು ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ಏಪ್ರಿಲ್‍ನಲ್ಲಿ ಆಕ್ಷೇಪ ಮಾಡಿತ್ತು. ಈ ಅವಧಿ ಮುಗಿಯುವ ಎರಡು ದಿನ ಮೊದಲೇ ಮತ್ತೆ ಆರು ತಿಂಗಳ ಕಾಲ ಮುಂದುವರಿಸಿದೆ.

ಚೀನಾದ ಈ ನಡೆ ಬಗ್ಗೆ ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಅಕ್ಟೋಬರ್‍ನಲ್ಲಿ ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭೇಟಿಯಾಗಲಿರುವ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಈ ವಿಷಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

comments

Related Articles

error: