ಕರ್ನಾಟಕಪ್ರಮುಖ ಸುದ್ದಿ

ಆರ್‍ಟಿಸಿಯಲ್ಲಿ ಪಟ್ಟೆದಾರ/ ಅವರ ಕುಟುಂಬಸ್ಥರ ಹೆಸರು ನಮೂದು ಬಗ್ಗೆ ಅಭಿಪ್ರಾಯ ಸಂಗ್ರಹ

ರಾಜ್ಯ(ಮಡಿಕೇರಿ) ಫೆ.10:-ಕೊಡಗು ಜಿಲ್ಲೆಯಲ್ಲಿ ಪೌತಿ ಖಾತೆ ಬದಲಾವಣೆ-ಆರ್‍ಟಿಸಿಯಲ್ಲಿ ಪಟ್ಟೆದಾರ ಮತ್ತು ಅವರ ಕುಟುಂಬಸ್ಥರ ಹೆಸರು ನಮೂದಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ  ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸುವ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಮಾಬಂಧಿ ವಹಿ ಚಾಲ್ತಿಯಲ್ಲಿತ್ತು, 2000 ಇಸವಿಯಿಂದ ಆರ್‍ಟಿಸಿ ಚಾಲ್ತಿಗೆ ಬಂದ ನಂತರ ಪಟ್ಟೆದಾರಿಕೆ ಹಾಗೂ ಪೌತಿ ವಾರಸುದಾರರ ಬದಲಾವಣೆ ವಿಷಯದಲ್ಲಿ ಗೊಂದಲ ಹಾಗೂ ಸಮಸ್ಯೆಗಳ ಬಗ್ಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಳಕು ಚೆಲ್ಲಿದ್ದು, ಆ ದಿಸೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವಂತೆ ಕೋರಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ.ದಯಾನಂದ ಅವರು ಕೊಡಗು ಜಿಲ್ಲೆಯಲ್ಲಿ ಶೇ.60 ರಿಂದ 70 ರಷ್ಟು ಭೂಮಿ ಪಟ್ಟೆದಾರರ ಹೆಸರಿನಲ್ಲಿದೆ. ನಮೂನೆ 6 ರಲ್ಲಿ ಹಿಡುವಳಿದಾರರ ಹೆಸರು ಇರುತ್ತದೆ. ಆದರೆ ಪಟ್ಟೆದಾರರು ತೀರಿಕೊಂಡಿದ್ದಲ್ಲಿ ಪಟ್ಟೆದಾರರ ಹೆಸರನ್ನು ತೆಗೆದುಹಾಕಿ ಹಿಡುವಳಿದಾರರ ಹೆಸರನ್ನು ಸೇರ್ಪಡೆ ಮಾಡಬೇಕು ಎಂದು ಸಲಹೆ ಮಾಡಿದರು.
ಸ್ಥಳೀಯವಾಗಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷರು ಸ್ಥಳ ಪರಿಶೀಲನೆ ಮಾಡಬೇಕು. ಭೂಮಿಗೆ ಕಂದಾಯ ನಿಗಧಿ ಮಾಡಬೇಕು ಎಂದು ದಯಾನಂದ ಅವರು ಹೇಳಿದರು.
ಕೊಡಗು ಏಕೀಕರಣ ರಂಗದ ಸೋಮಯ್ಯ ಅವರು ಮಾತನಾಡಿ ಕಂದಾಯ ಇಲಾಖೆಯಲ್ಲಿ ಪೌತಿ ಖಾತೆಯನ್ನು ಸರಳೀಕರಿಸಬೇಕು ಎಂದರು.
ಸಣ್ಣ ಬೆಳೆಗಾರರಾದ ಪ್ರದೀಪ್ ಪೂವಯ್ಯ ಅವರು ಮಾತನಾಡಿ ಭೂಮಿ ಹಕ್ಕು ಸಂಬಂಧಿಸಿದಂತೆ ಇಡೀ ಭಾರತದಲ್ಲಿಯೇ ಇಲ್ಲದಿರುವುದು ಕೊಡಗು ಜಿಲ್ಲೆಯಲ್ಲಿದೆ. ಹಿಂದೆ ಜಮಾಬಂದಿ ಇತ್ತು, ನಂತರ ಆರ್‍ಟಿಸಿ ಆಯಿತು. ಕೃಷಿಕರಿಗೆ ಹಿಡುವಳಿ ಭೂಮಿಯ ಆರ್‍ಟಿಸಿ ದೊರೆತು ಸಾಲ ಸೌಲಭ್ಯ ಪಡೆಯಲು ಸಹಕರಿಸಬೇಕು ಎಂದು ಅವರು ಕೋರಿದರು.
ಜಿಲ್ಲೆಯಲ್ಲಿ ಕಂದಾಯ ಅದಾಲತ್ ನಡೆಯಬೇಕು. ಮೂರು ಉಪ ವಿಭಾಗ ಮಾಡಿ ಉಪ ವಿಭಾಗಾಧಿಕಾರಿ ಅವರನ್ನು ನಿಯೋಜಿಸಬೇಕು ಎಂದು ಅವರು ಸಲಹೆ ಮಾಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಮಾತನಾಡಿ ಕೃಷಿಕರು ಎಲ್ಲಾ ಬ್ಯಾಂಕ್‍ಗಳಲ್ಲಿಯೂ ಸಾಲ ಸೌಲಭ್ಯ ಪಡೆಯುವಂತಾಗಲು ಅವಕಾಶ ಮಾಡಬೇಕಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಎಲ್ಲಾ ಕೃಷಿಕರಿಗೂ ಸಾಲ ದೊರೆಯುತ್ತಿಲ್ಲ ಎಂದು ಗಮನ ಸೆಳೆದರು.
ಕೊಡಗು ಜಿಲ್ಲೆಯಲ್ಲಿ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇರುತ್ತದೆ. ಪಟ್ಟೆದಾರರು ತೀರಿಕೊಂಡ ನಂತರ ಕುಟುಂಬದವರು ಸಭೆ ಮಾಡಿ ಹಿರಿಯರನ್ನು ಪಟ್ಟೆದಾರರನ್ನಾಗಿ ಮಾಡಿಕೊಳ್ಳಬೇಕು. ಆದರೆ ಈ ಕೆಲಸ ಜಿಲ್ಲೆಯಲ್ಲಿ ಆಗುತ್ತಿಲ್ಲ. ಕುಟುಂಬದ ಸಮಸ್ಯೆಗಳಿಂದಾಗಿ ಗೊಂದಲವಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು.
ಕಾಫಿ ಬೆಳೆಗಾರರಾದ ನಂದ ಸುಬ್ಬಯ್ಯ ಅವರು ಮಾತನಾಡಿ ಭೂ ಕಂದಾಯ ಕಾಯ್ದೆ ಜಾರಿಯಾದ ನಂತರ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇರಬಹುದೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದರು.
ಮಾತಂಡ ಪೂವಯ್ಯ ಅವರು ಮಾತನಾಡಿ ಪಟ್ಟೆದಾರರ ಪದ್ಧತಿ ಬದಲಾಗಿ, ಕುಟುಂಬದಲ್ಲಿನ ಭೂಮಿ ಉಳುಮೆ ಮಾಡುವವರ ಹೆಸರಿಗೆ ಆರ್‍ಟಿಸಿ ಆಗಬೇಕು ಎಂದು ಅವರು ಸಲಹೆ ಮಾಡಿದರು.
ಕೊಡಗು ಪ್ಲಾಂಟರ್ಸ್ ಅಸೋಷಿಯೇಷನ್ ವಿಶ್ವನಾಥ ಅವರು ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಪಟ್ಟೆದಾರರ ಹೆಸರು ಅಗತ್ಯವಿಲ್ಲ. ಖಾಲಿ ಜಮೀನಿಗೂ ಕಂದಾಯ ನಿಗಧಿ ಮಾಡಬೇಕಿರುವುದರಿಂದ ಖುಷ್ಕಿ ಕಂದಾಯ ನಿಗದಿ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಪ್ರತೀ ಜಾಗಕ್ಕೂ ಕಂದಾಯ ನಿಗಧಿ ಮಾಡಬೇಕು. ಜಿಲ್ಲೆಯಲ್ಲಿ ಕಂದಾಯಕ್ಕೆ ಒಳಪಡದ ಭೂಮಿ ಎಷ್ಟು ಎಕರೆ ಇದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ‘ಏಕಗವಾಕ್ಷಿ ಪದ್ಧತಿ ಜಾರಿಯಾಗಬೇಕು ಎಂದು ಅವರು ಕೋರಿದರು.
ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಂ.ಬಿ.ದೇವಯ್ಯ ಅವರು ಮಾತನಾಡಿ ಭೂಮಿ ಪಟ್ಟೆದಾರರ ಹೆಸರಿನಲ್ಲಿ ಇರುವ ಸಾಧಕ ಬಾದಕಗಳ ಬಗ್ಗೆ ಸುದೀರ್ಘ ಚರ್ಚೆ ಆಗಬೇಕಿದೆ ಎಂದರು.
ಸರ್ಕಾರಿ ವಕೀಲರಾದ ಕವೀಂದ್ರ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಮುಂದುವರೆಯಬೇಕು. ಪಾಲು ಪಾರಿಕತ್ ಮೇಲೆ ಆರ್‍ಟಿಸಿ ಮಾಡಿಕೊಡಬೇಕು. ಕಂದಾಯ ನಿಗಧಿಯಾದಾಗ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದರು.

ಕೊಡಗು ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪವನ್ ಪೆಮ್ಮಯ್ಯ ಅವರು ಮಾತನಾಡಿ ಭೂಮಿ ಆರ್‍ಟಿಸಿ ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರಿಗೆ ಅಗತ್ಯ ತರಬೇತಿ ನೀಡಬೇಕಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಕೋರಿದರು.
ಖಾತೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ 250 ರೂಪಾಯಿ ವಿಭಾಗ ಪತ್ರ ಇದ್ದರೆ ಸಾಕಾಗುತ್ತದೆ. ಆದರೆ ಪಟ್ಟೆದಾರರ ವಂಶವೃಕ್ಷ ಕೇಳುತ್ತಾರೆ ಎಂದರು.
ಬೋಸ್ ಅವರು ಮಾತನಾಡಿ ಭೂಮಿ ಉಳುಮೆ ಮಾಡುವವರು ಯಾರೋ, ಪಟ್ಟೆದಾರರು ಯಾರೋ ಆಗಿರುತ್ತಾರೆ. ಆದ್ದರಿಂದ ಪಟ್ಟೆದಾರರ ಪದ್ಧತಿಯನ್ನು ಕೈಬಿಟ್ಟು, ಹಿಡುವಳಿದಾರರ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಅವರು ಸಲಹೆ ಮಾಡಿದರು.
ಪ್ರಭು ಅವರು ಮಾತನಾಡಿ ಜಮಾಬಂದಿ ಇದ್ದಾಗ ಚೆನ್ನಾಗಿತ್ತು, ಆದರೆ ಆರ್‍ಟಿಸಿ ಜಾರಿಯಾದ ನಂತರ ಮಕ್ಕಳ ಹೆಸರನ್ನು ಸೇರ್ಪಡೆ ಮಾಡುವುದು ಕಷ್ಟವಾಗಿದೆ ಎಂದರು.
ಕಾವೇರಿ ಸೇನೆಯ ಸಂಚಾಲಕರಾದ ರವಿಚಂಗಪ್ಪ ಅವರು ಮಾತನಾಡಿ ಕಂದಾಯ ಇಲಾಖೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿದರೆ ಸಮಸ್ಯೆಗಳನ್ನು ಪರಿಹರಿಸಬಹುದು. ಆದರೆ ಈ ಕೆಲಸ ಆಗುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಹಿರಿಯ ವಕೀಲರಾದ ಕೃಷ್ಣಭಟ್ ಅವರು ಮಾತನಾಡಿ ಪಟ್ಟೆದಾರರು ಮೃತಪಟ್ಟ ನಂತರ ಕುಟುಂಬದ ಮತ್ತೊಬ್ಬರು ಪಟ್ಟೆದಾರರಾಗಬಹುದು ಎಂದು ಅವರು ತಿಳಿಸಿದರು.
ಕೊಡಗಿನ ಭೂಮಿಗೆ ಕಂದಾಯ ನಿಗಧಿಯಾಗಬೇಕು. ಕುಟುಂಬದ ಸದಸ್ಯರ ಒಮ್ಮತ ಪಡೆದು ಪಟ್ಟೆದಾರರ ಹೆಸರು ಸೇರ್ಪಡೆ ಮಾಡಬಹುದು. ಪ್ರತೀ ಜಮೀನಿಗೆ ಖುಷ್ಕಿ ಕಂದಾಯ ನಿಗಧಿ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಮನು ಸೋಮಯ್ಯ ಅವರು ಮಾತನಾಡಿ ಪೌತಿ ಖಾತೆ ಬದಲಾವಣೆ, ಆರ್‍ಟಿಸಿ ಪಟ್ಟೆದಾರ/ ಕುಟುಂಬಸ್ಥರ ಹೆಸರು ನಮೂದಿಸುವ ಸಂಬಂಧ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಬೇಕು ಎಂದು ಅವರು ಸಲಹೆ ಮಾಡಿದರು.
ಪಟ್ಟೆದಾರರ ಕುಟುಂಬದವರ ಅಭಿಪ್ರಾಯ ಪಡೆದು ಹಿರಿಯರನ್ನು ಪಟ್ಟೆದಾರರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.
ಮತ್ತೊಬ್ಬ ಹಿರಿಯ ಕೃಷಿಕರಾದ ಎಂ.ವಿ.ಸುಬ್ರಾಯ ಅವರು ಕೊಡಗಿನ ಎಲ್ಲಾ ಜಮೀನುಗಳಿಗೆ ಕಂದಾಯ ನಿಗಧಿ ಮಾಡಬೇಕು ಎಂದು ಕೋರಿದರು.
ವಕೀಲರಾದ ಯಾಲದಾಳು ಮನೋಜ್ ಬೋಪಯ್ಯ ಅವರು ಮಾತನಾಡಿ ಪಟ್ಟೆದಾರರ ಹೆಸರು ತೆಗೆಯಲು ಮಾನದಂಡ ಇರಬೇಕು. ದಾಖಲೆಗಳು ತಿದ್ದುಪಡಿಯಾಗುತ್ತಿದ್ದು ಎಚ್ಚರವಹಿಸಬೇಕಿದೆ. ಪಟ್ಟೆದಾರರ ಹೆಸರನ್ನು ವಂಶವೃಕ್ಷ ಇಲ್ಲದೆ ತೆಗೆಯಬಾರದು ಎಂದರು. ಇದಕ್ಕೆ ಮತ್ತೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.
ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಈಗಾಗಲೇ ಸರ್ಕಾರದಿಂದ ಮೂರನೇ ಶನಿವಾರ ಜಿಲ್ಲಾಧಿಕಾರಿಯವರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುತ್ತದೆ. ಭೂಕಂದಾಯ ನಿಗಧಿ ಸಂಬಂಧಿಸಿಂದಂತೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಪಟ್ಟೆದಾರರ ಹೆಸರು ಸಂಬಂಧ ಜನಪ್ರತಿನಿಧಿಗಳ ಜೊತೆ ಮತ್ತೊಂದು ಸಭೆ ಮಾಡಲಾಗುವುದು. ಜಮೀನು ಸರ್ವೆ ಕಾರ್ಯ ಚುರುಕುಗೊಳಿಸಲಾಗುವುದು. ಮಾಜಿ ಸೈನಿಕರಿಗೆ ಭೂಮಿ ಒದಗಿಸುವುದು ಮತ್ತಿತರ ಬಗ್ಗೆ ಗಮನಹರಿಸಲಾಗುವುದು ಎಂದರು.
ಪ್ರಮುಖರಾದ ಐಯಣ್ಣ, ಗಣಪತಿ, ಇತರರು ಹಲವು ಸಲಹೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜುಮೊಗವೀರ, ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್, ಸಹಕಾರ ಇಲಾಖೆಯ ಉಪ ನಿಬಂಧಕರಾದ ಸಲೀಮ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ, ತಹಶೀಲ್ದಾರ್ ಮಹೇಶ್ ಅವರು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: