ಕರ್ನಾಟಕಪ್ರಮುಖ ಸುದ್ದಿ

ಆತಂಕವಿಲ್ಲದೇ ಶಾಲೆ ಆರಂಭಿಸಿ, ನಿಮ್ಮ ಜೊತೆ ನಾವಿದ್ದೇವೆ : ಜಿಲ್ಲಾಧಿಕಾರಿ

ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷಿದ್ಧ

ರಾಜ್ಯ(ದಾವಣಗೆರೆ)ಫೆ.14:- ಹೈಕೋರ್ಟ್ ಮಧ್ಯಂತರ ತೀರ್ಪಿನ ಆದೇಶದಂತೆ ಫೆಬ್ರವರಿ 14ರ ಸೋಮವಾರದಿಂದ 9 ಮತ್ತು 10 ನೇ ತರಗತಿಗಳನ್ನು ಆರಂಭಿಸಿ, ಅದಕ್ಕೂ ಮುನ್ನ ಪೋಷಕರ ಸಭೆ ಕರೆದು ಯಾವುದೇ ಆತಂಕವಿಲ್ಲದೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಅವರಿಗೆ ತಿಳಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ  ಕಾಲೇಜುಗಳ ಆಡಳಿತ ಮಂಡಳಿ,ಪ್ರಿನ್ಸಿಪಾಲರುಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿತದೃಷ್ಠಿ ಹಾಗೂ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೇ ಶಾಲೆಗಳನ್ನು ಆರಂಭಿಸಿ,ಯಾವುದೇ ಸಮಸ್ಯೆಯಾದರೆ ತಕ್ಷಣ 112 ಗೆ ಕರೆಮಾಡಿ ತಕ್ಷಣ ಪೊಲೀಸ್ ಸಿಬ್ಬಂದಿಗಳು ನಿಮಗೆ ಸ್ಪಂದಿಸುತ್ತಾರೆ.ಎಂದರು
ಈಗಾಗಲೇ  ಮುಖ್ಯಮಂತ್ರಿಗಳು ವಿಡಿಯೋ ಕಾನ್ಪರೆನ್ಸ್ ಮುಖಾಂತರ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದು ಅವರ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ. ಆದಷ್ಟು ಶಾಲಾ ಆವರಣದಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಿ ಇದರಿಂದ ಶಾಲೆಗಳಿಗೆ ಯಾರಾದರು ಅಪರಿಚಿತರು ಬಂದರೆ ಅವರ ಚಲನ ವಲನ ತಿಳಿಯಲಿದೆ, ಹಾಗೂ ನಾನೂ ಸೇರಿದಂತೆ ವಿವಿಧ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುತ್ತೇವೆ.
ಈಗಾಗಲೇ ಆದೇಶ ಹೊರಡಿಸಿ ಶಾಲಾ ಕಾಲೇಜಿನ ಆವರಣವನ್ನು ಶಿಕ್ಷಕರು,ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಅನಿವಾರ್ಯ ಸಂದರ್ಭದಲ್ಲಿ ಪೋಷಕರನ್ನು ಹೊರತುಪಡಿಸಿ ಬೇರೆಯವರು ಪ್ರವೇಶ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ, ಈನಿಟ್ಟಿನಲ್ಲಿ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ವಾತಾವರಣ ತಿಳಿಯಾಗುವವರಗೆ ಡಿಡಿಪಿಐ ಅಥವ ಬಿಇಓಗಳು ಯಾವುದೇ ಸಭೆ ಕರೆಯುವಂತಿಲ್ಲ ಎಂದರು.
ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿ ಹೋರಾಟದಲ್ಲಿ ಭಾಗಿಯಾಗಿರುವ ಕೆಲ ವಿದ್ಯಾರ್ಥಿಗಳನ್ನ ಮುಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಳಿಸುವುದಾಗಿ ಬೆದರಿಸಿರುತಾರೆಂದು ದೂರು ನೀಡಿದ್ದು ಯಾರಾದರು ಶಿಕ್ಷಕರು ಆ ರೀತಿ ನಡೆದುಕೊಂಡಿದ್ದರೆ ಅಂತಹ ಶಿಕ್ಷಕರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆಂದರು.
ಜಿಲ್ಲೆಯ ಪದವಿ ತರಗತಿಗಳಲ್ಲಿ 30828, ಪಿಯು ತರಗತಿಗಳಲ್ಲಿ 38190 ಹಾಗೂ ಪ್ರೌಢಶಾಲೆಗಳಲ್ಲಿ 1 ಲಕ್ಷ 18 ಸಾವಿರ ವಿಧ್ಯಾರ್ಥಿಗಳಿದ್ದು ಇವರ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ ಯಾರೂ ವದಂತಿಗಳಿಗೆ ಕಿವಿಗೊಡಬೇಡಿ,ಏನೂ ಆಗದೇ ಇದ್ದರೂ ಅನೇಕರು ವದಂತಿಗಳನ್ನು ಹರಿಬಿಡುತ್ತಾರೆ, ಅವುಗಳನ್ನು ನಂಬಬಾರದು ಹಾಗೂ ಪ್ರತಿಕ್ರಿಯಿಸಬಾರದು. ಸಾಮಾಜಿಕ ಜಾಲತಾಣಗಳನ್ನು ಮಾನಿಟರ್ ಮಾಡಲು ಈಗಾಗಲೇ ನಮ್ಮ ಕಛೇರಿಯಲ್ಲಿ ಪ್ರತ್ಯೇಕ ಸೆಲ್ ತೆರೆದಿದ್ದು 24*7 ಮಾನಿಟರ್ ಮಾಡಲಾಗುತ್ತಿದೆ, ಹಾಗಾಗಿ ವದಂತಿಗಳನ್ನು ಹಬ್ಬಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಎಲ್ಲೆಡೆ ಪೊಲೀಸ್ ಸಿಬ್ಬಂದಿ ಹಾಕಲಾಗುತ್ತಿದ್ದು ವಿವಿಧ ಪೊಲೀಸ್ ಪೋರ್ಸ್‍ಗಳು ಜಿಲ್ಲೆಗೆ ಆಗಮಿಸಿವೆ ಹಾಗಾಗಿ ಯಾವುದೇ ಘಟನೆಗಳಾದರೆ ತಿಳಿಸಿ ತಕ್ಷಣಕ್ಕೆ ನೆರವಿಗೆ ಬರಲಾಗುವುದೆಂದರು. ಶಾಲೆಗಳ ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲರುಗಳು ಪೋನ್ ಸಂಪರ್ಕದಲ್ಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆದರೆ ತಕ್ಷಣ ಮಾಹಿತಿ ನೀಡಿ ಎಂದರು.
ಜಿ.ಪಂ. ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ ಈ ಕುರಿತು ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು ಅದನ್ನು ಪಾಲಿಸಬೇಕಾಗಿದೆ, ಇದೊಂದು ಸಾಂವಿಧಾನಿಕ ಹಾಗೂ ವೈಯಕ್ತಿಕ ವಿಷಯವಾಗಿದ್ದು ತೀರ್ಪು ಎಂದಾದರು ಬರಬಹುದು.
ನ್ಯಾಯಾಲಯ ಶಾಲೆಗಳನ್ನು ಆರಂಭಿಸುವಂತೆ ತಿಳಿಸಿದೆ, ಮಾನ್ಯ ಮುಖ್ಯಮಂತ್ರಿಗಳೂ ಕೂಡ ಶಾಲಾ ಆಡಳಿತ ಮಂಡಳಿಗಳು ಪೋಷಕರ ಸಭೆ ಕರೆದು ವಾತಾವರಣ ತಿಳಿಗೊಳಿಸುವಂತಹ ಕೆಲಸ ಮಾಡಿ ಎಂದಿದ್ದಾರೆ, ಕೆಲವರು ವೈಯಕ್ತಿಕ ಲಾಭಕ್ಕೆ ಸಂದರ್ಭ ಬಳಸಿಕೊಳ್ಳುತ್ತಾರೆ ಅಂತಹವರ ಬಗೆಗೆ ಎಚ್ಚರದಿಂದಿರಿ, ಈಗಾಗಲೇ ಕೋವಿಡ್ನಿಂದ ಶಾಲೆಗಳು ನಡೆದಿಲ್ಲ ಮುಂದೆಯೂ ಹಾಗಾಗುವುದು ಬೇಡ ಎಂದರು.
ವಿವಿಧ ಶಾಲಾ ಕಾಲೇಜುಗಳ ಪದಾಧಿಕಾರಿಗಳು ಪ್ರತಿಕ್ರಿಯಿಸಿ, ಪೋಷಕರ ಸಭೆಗೆ ಅರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲು ಮನವಿ ಮಾಡಿದರು, ಈಗಾಗಲೆ ಅಹಿತಕರ ಘಟನೆಗಳು ನಡೆದಿರುವ ಕಾಲೇಜುಗಳಲ್ಲಿ ಘಟನೆಗೆ ಕಾರಣರಾದ ಮುಖಂಡರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದರು ಮತ್ತು ಕಾಲೇಜು ಆರಂಭದ ದಿನ ಪೊಲೀಸ್ ಸಿಬ್ಬಂದಿಯನ್ನು ನೀಡಲು ಮನವಿ ಮಾಡಿದರು, ಕಾಲೇಜಿನಲ್ಲಿ ಮೊಬೈಲ್ ನಿಷೇಧಿಸಿದರೆ ಶೇ80 ರಷ್ಟು ಸಮಸ್ಯೆ ಬಗೆಹರಿಯುತ್ತದೆಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಬಾಗಾಧಿಕಾರಿ ಮಮತ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: