ಮೈಸೂರು

ಹಿಜಾಬ್-ಕೇಸರಿ ಶಾಲು ವಿವಾದ : ಸ್ಥಗಿತಗೊಂಡಿದ್ದ ಕಾಲೇಜುಗಳು ಪುನರಾರಂಭ

ಮೈಸೂರು,ಫೆ.16:- ಹಿಜಾಬ್-ಕೇಸರಿ ಶಾಲು ವಿವಾದದಿಂದಾಗಿ ಕಾಲೇಜುಗಳು ಕೆಲವು ದಿನಗಳಿಂದ ಸ್ಥಗಿತಗೊಂಡಿತ್ತು. ಯಾವುದೇ ಧಾರ್ಮಿಕತೆ ಸೂಚಿಸುವ ಉಡುಪುಗಳನ್ನು ಧರಿಸಲು ಅವಕಾಶವಿಲ್ಲವೆಂದು ನ್ಯಾಯಾಲಯವು ಮಧ್ಯಂತರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರು ಜಿಲ್ಲೆಯಲ್ಲಿಯೂ ಕಾಲೇಜುಗಳು ಪುನರಾರಂಭವಾಗಿವೆ.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಎಲ್ಲಾ ಶಾಲಾ ಕಾಲೇಜುಗಳ 200ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಕಾಲೇಜುಗಳಿಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಉಳಿದವರ ಪ್ರವೇಶಕ್ಕೆ ಈ ವ್ಯಾಪ್ತಿಯಲ್ಲಿ ನಿಷೇಧ ಹೇರಿದ್ದಾರೆ.

ಮೆರವಣಿಗೆ, ಗುಂಪುಗೂಡುವುದು, ಪ್ರತಿಭಟನೆಯನ್ನು ನಿಷೇಧಿಸಲಾಗಿದ್ದು, ಫೆ.28ರವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ. ಈ ಕುರಿತು ಡಿಡಿಪಿಯು ಶ್ರೀನಿವಾಸ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳು ಮೊದಲು ಬರುತ್ತಿದ್ದಂತೆ ಈಗಲೂ ಬರಲು ಸೂಚಿಸಲಾಗಿದೆ. ನ್ಯಾಯಾಲಯದ ಆದೇಶಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಈಗಾಗಲೇ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಸೂಚಿಸಲಾಗಿದೆ ಎಂದರು. ಒಂದು ವೇಳೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿ ಬಂದರೆ ಅವರಿಗಾಗಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಕೊಠಡಿಯಲ್ಲಿ ಅವರಿಗೆ ಆದೇಶದ ಮಹತ್ವ, ಹಾಗೂ ಅದರ ಪಾಲನೆ ಕುರಿತು  ಮನವರಿಕೆ ಮಾಡಬೇಕು ಎಂದರು.

ಎನ್ ಆರ್ ಮೊಹಲ್ಲಾ ವ್ಯಾಪ್ತಿಯಲ್ಲಿ 17ಕಾಲೇಜುಗಳಿದ್ದು ಇಲ್ಲೆಲ್ಲ ವಿಶೇಷ ಭದ್ರತೆ ಒದಗಿಸಲಾಗಿದೆ.  ಉದಯಗಿರಿ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಬಳಿಯೂ ನಿರಂತರವಾಗಿ ಗಸ್ತು ಹೆಚ್ಚಿಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆ, ಕರ್ನಾಟಕ ರಾಜ್ಯ ಮೀಸಲು ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಹುಣಸೂರು,ನಂಜನಗೂಡು ತಾಲೂಕುಗಳಲ್ಲಿಯೂ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ತಾಲೂಕುಗಳಲ್ಲಿ ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಎಂದಿನಂತೆ ಕಾಲೇಜಿಗೆ ಮರಳಿದ್ದು, ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಕುರಿತು ವರದಿಯಾಗಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: