ದೇಶಪ್ರಮುಖ ಸುದ್ದಿ

ಐಡಿಎಸ್ ಯೋಜನೆಯಡಿ 65,250 ಕೋಟಿ ರು. ಕಪ್ಪುಹಣ ಘೋಷಣೆ

ನವದೆಹಲಿ: ನಾಲ್ಕು ತಿಂಗಳಲ್ಲಿ ಆದಾಯ ಘೋಷಣೆಯಡಿ 65,250 ಕೋಟಿ ರುಪಾಯಿ ಕಪ್ಪು ಹಣ ಘೋಷಣೆಯಾಗಿದ್ದು, ಕೇಂದ್ರ ಸರಕಾರಕ್ಕೆ 29,362 ಕೋಟಿ ರುಪಾಯಿ ಆದಾಯ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‍ ಜೇಟ್ಲಿ ಅವರು ಶನಿವಾರ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪು ಹಣ ಘೋಷಣೆಗೆ ಕೇಂದ್ರ ಸರಕಾರ ಸೆ.30ರ ವರೆಗೆ ಕಾಲಾವಕಾಶ ನೀಡಿತ್ತು. ಈ ಗಡುವಿನೊಳಗೆ ಸುಮಾರು 64,275 ಮಂದಿ ತಮ್ಮ ತಮ್ಮ ಕಪ್ಪುಹಣ ಘೋಷಣೆ ಮಾಡಿದ್ದಾರೆಂದು ಜೇಟ್ಲಿ ತಿಳಿಸಿದ್ದಾರೆ. ಕಪ್ಪು ಹಣ ಘೋಷಿಸಿದವರು ಇನ್ನೂ ಹೆಚ್ಚು ಮಂದಿಯಿದ್ದು, ಅಂತಿಮ ಪಟ್ಟಿ ಸಿದ್ಧವಾದ ಬಳಿಕವಷ್ಟೇ ಖಚಿತ ಮಾಹಿತಿ ನೀಡಲು ಸಾಧ್ಯ ಎಂದರು.

65,250 ಕೋಟಿ ರೂಪಾಯಿಗಳಲ್ಲಿ ಶೇ.45ರಷ್ಟು ಹಣ ತೆರಿಗೆ ಹಾಗೂ ದಂಡ ರೂಪದಲ್ಲಿ ಸರಕಾರದ ಬೊಕ್ಕಸಕ್ಕೆ ಸೇರಲಿದೆ. ಕಪ್ಪು ಹಣ ಘೋಷಿಸಿದವರು ಮುಂದಿನ ವರ್ಷದ ಸೆಪ್ಟೆಂಬರ್‍ 30ರ ಒಳಗೆ ಎರಡು ಕಂತುಗಳಲ್ಲಿ ತೆರಿಗೆ ಕಟ್ಟುವ ಅವಕಾಶ ಒದಗಿಸಲಾಗಿದೆ. ವಿದೇಶಗಳಲ್ಲಿ ಕಪ್ಪು ಹಣ ಹೊಂದಿರುವವರು ತೆರಿಗೆ ಮತ್ತು ದಂಡದ ರೂಪದಲ್ಲಿ ಕಪ್ಪುಹಣದ ಶೇ.45ರಷ್ಟನ್ನು ಸರ್ಕಾರಕ್ಕೆ ಪಾವತಿಸಿ ಕಪ್ಪುಹಣ ಘೋಷಿಸುವ ಅವಕಾಶವನ್ನು ಕೇಂದ್ರ ಸರಕಾರ ನೀಡಿತ್ತು. ಇವರಲ್ಲಿ ಸುಮಾರು 644 ಮಂದಿ ಕಪ್ಪುಹಣದ ಬಗ್ಗೆ ಮಾಹಿತಿ ನೀಡಿದ್ದು, 2,428 ಕೋಟಿ ರು. ತೆರಿಗೆ ರೂಪದಲ್ಲಿ ಸಂಗ್ರಹವಾಗಿತ್ತು. ಪನಾಮ ಪೇಪರ್ಸ್‍ ಮತ್ತು ಎಚ್‍ಎಸ್‍ಬಿಸಿ ಪಟ್ಟಿಯನ್ನಾಧರಿಸಿ ಕೇಂದ್ರವು ಕಪ್ಪುಹಣ ಹೊಂದಿರುವವರ ಹೆಸರಿನ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ.

ಐಡಿಎಸ್ ಯೋಜನೆಯಡಿ ಆದಾಯ ಘೋಷಿಸಿದವರನ್ನು ಮೋದಿ ಅಭಿನಂದಿಸಿದ್ದಾರೆ. ‘ಆರ್ಥಿಕ ಪಾರದರ್ಶಕತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಕೊಡುಗೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

 

Leave a Reply

comments

Related Articles

error: