ಕರ್ನಾಟಕಮೈಸೂರು

ಅರಮನೆ ಆವರಣದಲ್ಲಿ ಅಂಬಾರಿ ಆನೆಗೆ ತಾಲೀಮು

ಮೈಸೂರು ದಸರಾ ಉತ್ಸವ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಅದರ ಆಕರ್ಷಣೆಯೇ ಅಂತಹುದು. ಅದನ್ನು ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗೋತ್ಸವಗಳು, ವಿವಿಧ ಕಡೆ ಏರ್ಪಡಿಸಲಾಗುವ ಆಹಾರಮೇಳ, ವಸ್ತುಪ್ರದರ್ಶನ, ಇವುಗಳಿಗೆ ಮನಸೋಲದವರೇ ಇಲ್ಲ.

ಅದರಲ್ಲೂ ದಸರಾ ಉತ್ಸವದ ಕೊನೆಯ ದಿನ ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕೃತಗೊಂಡು ರಾಜಪಥದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆಯಿಡುವ ಗಜಪಡೆಗಳನ್ನು ಎಷ್ಟು ನೋಡಿದರೂ ಸಾಲದು. ಅವುಗಳನ್ನು ತಮ್ಮ ಕಣ್ಣುಗಳಲ್ಲಿ ಸೆರೆ ಹಿಡಿದಿಟ್ಟುಕೊಳ್ಳಲು ಆಗಮಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ.  ಅದ್ಧೂರಿಯಾಗಿ ನಡೆಯುವ ಜಂಬೂ ಸವಾರಿಗೆ ಈಗಾಗಲೇ ತಾಲೀಮು ನಡೆದಿದೆ.

ಮೈಸೂರು ದಸರಾ ಉತ್ಸವದ ಕೊನೆಯ ದಿನ ನಡೆಯಲಿರುವ ಜಂಬೂ ಸವಾರಿಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ಆನೆಗೆ ಅರಮನೆ ಆವರಣದಲ್ಲಿ ಮರದ  ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.

ಸಂಪ್ರದಾಯಬದ್ಧ ಪೂಜೆ ಸಲ್ಲಿಸಿದ ಬಳಿಕ ತಾಲೀಮು ನಡೆಯಿತು. ಚಿನ್ನದ ಅಂಬಾರಿಯನ್ನು ಹೋಲುವ ಮರದ ಅಂಬಾರಿಯೊಳಕ್ಕೆ ಮರಳಿನ ಚೀಲಗಳನ್ನು ಇರಿಸಿ ಅರ್ಜುನನ ಬೆನ್ನಿಗೆ ಕಟ್ಟಿ ಸಾಗಲಾಯಿತು. ಅರ್ಜುನನ ನೇತೃತ್ವದಲ್ಲಿ ಗಜಪಡೆಗಳು ಸಾಗಿ ಬಂದವು.

ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯ ಮಹಡಿಯ ಮೇಲೆ ನಿಂತು ಆನೆಗಳಿಗೆ ಮರದ ಅಂಬಾರಿ ಕಟ್ಟುವುದನ್ನು ಹಾಗೂ ತಾಲೀಮು ನಡೆಸುವುದನ್ನು ವೀಕ್ಷಿಸಿದರು. ಅಂಬಾರಿಯನ್ನು ಮೈಮೇಲೆ ಇರಿಸಿದ ಬಳಿಕ ಮಹಾರಾಜನೆಡೆ ನೋಡಿ ಸೊಂಡಿಲನ್ನು ಮೇಲೆತ್ತಿ ನಮಸ್ಕರಿಸಿತು. ಬಳಿಕ ತನ್ನ ತಾಲೀಮನ್ನು ಮುಂದುವರಿಸಿತು.

ಕಳೆದ ಕೆಲದಿನಗಳ ಹಿಂದೆಯೇ ಗಜಪಡೆಗೆ ತಾಲೀಮು ನಡೆಯುತ್ತಿದೆ. ಶಬ್ದಗಳಿಗೆ ಗಲಿಬಿಲಿಗೊಳ್ಳದೇ ಸಾಗುತ್ತಿರಲಿ ಎಂಬ ಉದ್ದೇಶದಿಂದ ಫಿರಂಗಿ ಸಿಡಿಸಿ ತಾಲೀಮು ನಡೆಸಲಾಗಿತ್ತು. ಇದೀಗ ಅರಮನೆ ಆವರಣದಲ್ಲಿ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತಿದೆ.

Leave a Reply

comments

Related Articles

error: