ಮೈಸೂರು

ಕೆಂಪಾದವೋ ಎಲ್ಲ ಕೆಂಪಾದವೋ…!

ಮೈಸೂರು, ಮೇ.10:-   ಅರಮನೆಗಳ ನಗರಿ ಮೈಸೂರಿಗೆ ತನ್ನದೇ ಆದ ಸೌಂದರ್ಯವಿದೆ. ಇಲ್ಲಿನ ವಿವಿಧ ಪ್ರವಾಸಿತಾಣಗಳು, ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸಿದರೆ ಇಲ್ಲಿನ ತಂಪು ವಾತಾವರಣ ಹಲವರನ್ನು ಸೆಳೆದಿದೆ. ಆದರೆ ಏಪ್ರಿಲ್ ಮತ್ತು ಮೇ, ಜೂನ್ ಗಳಲ್ಲಿ ಮೈಸೂರು ಕೆಂಡದಂತೆ ಕಾಣಿಸುತ್ತದೆ, ಕಣ್ಣು ಹಾಯಿಸಿದಷ್ಟುದ್ದಕ್ಕೂ ಕೆಂಡದುಂಡೆಗಳಂತೆ ಕಂಡು ಬರುವ ಹೂಗಳು ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವುದರ ಜೊತೆ ಮನಸಿಗೆ ಮುದ ನೀಡಲಿದೆ.

ದಾರಿಹೋಕರಿಗೆ ನೆರಳಿಗಾಗಿ ಅಶೋಕ ರಸ್ತೆಯ ಬದಿಗಳಲ್ಲಿ ಸಾಲುಮರಗಳನ್ನು ನೆಡಿಸಿದ್ದನಂತೆ. ಅದೇ ರೀತಿ ಮೈಸೂರು ಮಹಾರಾಜರುಗಗಳೂ ಹಸಿರನ್ನು ಉಳಿಸಲು ಹಾಗೂ ನೆರಳಿಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ನೆಡಿಸಿದರು. ಏಪ್ರಿಲ್ ತಿಂಗಳ ಕೊನೆ ಹಾಗೂ ಮೇ ತಿಂಗಳಿನಲ್ಲಿ ಮೈಸೂರನ್ನು ನೋಡೋದೇ ಚೆಂದ. ಕೆಂಪಾದವೋ ಎಲ್ಲ ಕೆಂಪಾದವೋ

ಕವಿ ನಿಸಾರ್ ಅಹ್ಮದ್ ಅವರ ಕವನದ ಸಾಲುಗಳು ನೆನಪಿಗೆ ಬರುತ್ತವೆ. “ಸಾಲ್ಮರಗಳಲಿ ಚಂದದ ಚಾಮರ ನೋಟದ ವರ ಗುಲ್ ಮೊಹರು, ವೃಕ್ಷಗಳಲ್ಲೇ ಕಲಾವಿದವೀ ತರು ಕುಂದದ ಹರುಷದ ತವರು” ಅದನ್ನೇ ಇಲ್ಲಿ ಹೇಳಲಿಕ್ಕೆ ಹೊರಟಿರೋದು. ಡೆಲೊನಿಕ್ಸ್ ರೆಜಿಯಾ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಗುಲ್ ಮೊಹರ್ ಅಲಂಕಾರಿಕ ಸಸ್ಯ. ಸುಮಾರು 100-125 ವರ್ಷಗಳ ಹಿಂದೆ ಭಾರತಕ್ಕೆ ಬಂತು. ಕನ್ನಡದಲ್ಲಿ ಇದನ್ನು ಕತ್ತಿಕಾಯಿ ಮರ, ಹಿಂದಿಯಲ್ಲಿ ಗುಲ್ ಮೊಹರ್ ಎಂದು ಕರೆಯಲಾಗುತ್ತದೆ. ಮರ ಕೇವಲ 15ರಿಂದ 18ಮೀಟರ್ ಎತ್ತರ ಬೆಳೆಯಲಿದ್ದು,  ಬಳಿಕ ಛತ್ರಿಯಾಕಾರವನ್ನು ತಳೆಯಲಿದೆ. ಇದರ ಹೂವಿನ ಪಕಳೆಗಳು 7ರಿಂದ 8ಸೆಂ.ಮೀ ಇರಲಿದೆ.  ಉದ್ಯಾನವನಗಳಲ್ಲಿ ಇದನ್ನು ನೆರಳಿಗಾಗಿ ನೆಡಲಾಗುತ್ತದೆ. ಇದು ಬಾಂಗ್ಲಾದೇಶದಲ್ಲಿ ಏಪ್ರಿಲ್-ಮೇ, ಸೌತ್ ಪ್ಲೋರಿಡಾದಲ್ಲಿ ಮೇ-ಜೂನ್, ಈಜಿಪ್ತ್ ನಲ್ಲಿ ಮೇ-ಜೂನ್, ವಿಯೆಟ್ನಾಂನಲ್ಲಿ ಮೇ-ಜುಲೈ, ಕೆರಿಬಿಯನ್ ನಲ್ಲಿ ಮೇ-ಸೆಪ್ಟೆಂಬರ್ ಭಾರತದಲ್ಲಿ ಏಪ್ರಿಲ್-ಮೇ ಸಮಯಗಳಲ್ಲಿ ಹೆಚ್ಚಾಗಿ ಕಂಡು ಬರಲಿದೆ.

ಮೈಸೂರು ನಗರದ ಪ್ರಮುಖ ಬೀದಿಗಳಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ, ವಿಶ್ವವಿದ್ಯಾನಿಲಯದ ಬಳಿ ದೂರದಿಂದ ನೋಡಿದರೆ ಕೆಂಡದ ಮಳೆ ಸುರಿಯುತ್ತಿದೆಯೇನೋ ಅನ್ನುವಂತೆ ಭಾಸವಾಗುವಷ್ಟರ ಮಟ್ಟಿಗೆ ಈ ಹೂಗಳು ಅರಳಿ ನಳನಳಿಸುತ್ತಿವೆ. (ವರದಿ: ಎಸ್.ಎಚ್)

Leave a Reply

comments

Related Articles

error: