ಮೈಸೂರು

ಅಭಿನಂದನಾ ಕಾರ್ಯಕ್ರಮ: ಮೇ 13 ಮತ್ತು 14ರಂದು

ಮೈಸೂರು, ಮೇ 10 : ಸಂಶೋಧಕ, ಸಂಸ್ಕೃತಿ ಚಿಂತಕ ಡಾ.ಎಂ.ಪ್ರಭಾಕರ ಜೋಶಿಯವರು ಯಕ್ಷ ಪ್ರಪಂಚಕ್ಕೆ ನೀಡಿರುವ ಕೊಡುಗೆಯ ಸ್ಮರಣಾರ್ಥ ಅವರ ಅಭಿಮಾನಿ ಬಳಗದಿಂದ ಅಭಿನಂದನಾ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಾರ್ಯದರ್ಶಿ ಗ.ನಾ.ಭಟ್ಟ ತಿಳಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಮೇ 13 ಮತ್ತು 14 ರಂದು ನಗರದ ಜಗನ್ಮೋಹನ ಅರಮನೆಯಲ್ಲಿ ‘ಜೋಶಿ ವಾಗರ್ಥ ಗೌರವ’ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮೇ 13ರ ಬೆ.10 ಗಂಟೆಗೆ  ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ ವಹಿಸಲಿದ್ದಾರೆ.  ಸೀತಾರಾಮ್ ಭಟ್ ದಾಮ್ಲೆ, ಎಂ.ಬಾಲಚಂದ್ರ ಡೋಂಗ್ರೆ, ದಕ್ಷಿಣ ಕನ್ನಡ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಭಿನಂದನಾ ಕಾರ್ಯಕ್ರಮದ ಜತೆಗೆ ಡಾ.ಎಂ.ಪ್ರಭಾಕರ ಜೋಶಿಯವರ ಜೀವನ ಮತ್ತು ಸಾಧನೆ ಕುರಿತು ವಿಚಾರ ಸಂಕಿರಣ  ಇರಲಿದ್ದು,  ಪ್ರೊ.ಎಂ.ಎಲ್ ಸಾಮಗ, ಡಾ.ಚಂದ್ರಶೇಖರ ದಾಮ್ಲೆ, ಗ.ನಾ.ಭಟ್ಟ, ಉಮಾಕಾಂತ ಭಟ್ಟ ಹಾಗೂ ಇತರರು ಪಾಲ್ಗೊಂಡು ವಿಷಯ ಮಂಡಿಸಲಿದ್ದಾರೆ.

ಸಮಾರೋಪ ಸಮಾರಂಭ : ಮೇ 14ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,  ಖ್ಯಾತ ಯಕ್ಷ ಚಿಂತಕ ಡಾ.ಕೆ.ಎಂ.ರಾಘವ ನಂಬಿಯಾರ್, ಡಾ.ಎಂ.ಪ್ರಭಾಕರ ಜೋಶಿ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.  ಅಲ್ಲದೇ ಅಂಬಾ ದುರಂತ, ಚಕ್ರ ಗ್ರಹಣ ಯಕ್ಷಗಾನ ಪ್ರಸಂಗ ಹಾಗೂ 14ರಂದು ಬೆಂಗಳೂರಿನ ಸಿರಿಕಲಾ ಮೇಳ ತಂಡದಿಂದ ರಾಧಾಂತರಂಗ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ.

ತಾಳಮದ್ದಳೆ ಪ್ರದರ್ಶನ ಹಾಗೂ  ಸಾಕ್ಷ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು,  ಸಮಾರಂಭದಲ್ಲಿ ಖ್ಯಾತ ಕಲಾವಿದರು, ಚಿಂತಕರು, ಸಾಹಿತಿಗಳು, ಯಕ್ಷಗಾನ ಪ್ರೇಮಿಗಳು  ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಅಭಿನಂದನಾ ಸಮಿತಿಯ ಅಧ್ಯಕ್ಷ ಬಾಲಚಂದ್ರ ಎಂ.ಡೋಂಗ್ರೆ, ಗೌರವಾಧ್ಯಕ್ಷ ಸೀತಾರಾಮ ಭಟ್ ದಾಮ್ಲೆ, ಕೆ.ಬಿ.ಪುರುಷೋತ್ತಮಗೌಡ ಹಾಗೂ ವೀಣಾ ಡೋಂಗ್ರೆ ಉಪಸ್ಥಿತರಿದ್ದರು. (ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: