ಕರ್ನಾಟಕನಮ್ಮೂರುಮೈಸೂರು

ಕಾವೇರಿ ವಿವಾದ ಪರಿಶೀಲಿಸುವುದಾಗಿ ಮೋದಿ ಭರವಸೆ: ದೇವೇಗೌಡರ ಉಪವಾಸ ಅಂತ್ಯ

ಬೆಂಗಳೂರು: ಕಾವೇರಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಿದೆ ಎಂದು ಆರೋಪಿಸಿ ದೇವೇಗೌಡ ಅವರು ಶನಿವಾರದಂದು ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಆರಂಭಿಸಿದ್ದರು. ಮೈಸೂರಿನಿಂದ ವಿಧಾನಸೌಧಕ್ಕೆ ಸರ್ವಪಕ್ಷ ಸಭೆ ನಡೆಸಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರವಾಗಿ ದೇವೇಗೌಡರ ಬಳಿ ತೆರಳಿ ಉಪವಾಸ ಕೈಬಿಡುವಂತೆ ಮನವಿ ಮಾಡಿ, ಸಭೆಗೆ ಬರುವಂತೆ ಆಹ್ವಾನ ನೀಡಿದ್ದರು. ಇದನ್ನು ದೇವೇಗೌಡರು ನಿರಾಕರಿಸಿದ್ದರು.

ಕೇಂದ್ರ ಸಚಿವರಾದ ಸದಾನಂದ ಗೌಡ ಮತ್ತು ಅನಂತ್‍ ಕುಮಾರ್ ಪ್ರಧಾನಿ ಮೋದಿ ಸಂದೇಶವನ್ನು ದೇವೇಗೌಡರಿಗೆ ತಿಳಿಸಿ, ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ದೇವೇಗೌಡರ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆಯನ್ನು ಮೋದಿ ನೀಡಿದ್ದಾರೆಂದು ಸಚಿವರು ಮನವರಿಕೆ ಮಾಡಿದ ಮೇಲೆ ದೇವೇಗೌಡರು ಉಪವಾಸ ಅಂತ್ಯಗೊಳಿಸಿದರು.

ಕಾವೇರಿ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ತಮಿಳುನಾಡಿಗೆ ನೀರು ಬಿಡುಗಡೆಗೆ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಅವಕಾಶ ನೀಡಬಾರದೆಂಬ ಬೇಡಿಕೆಗಳನ್ನು ಮುಂದಿಟ್ಟು ದೇವೇಗೌಡರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಕೇಂದ್ರ ಸರಕಾರದಿಂದ ಬಂದಿರುವ ಭರವಸೆಗೆ ಮನ್ನಣೆ ನೀಡಿ ಉಪವಾಸ ಅಂತ್ಯಗೊಳಿಸಿದ್ದೇನೆ. ಕರ್ನಾಟಕಕ್ಕೆ ಮತ್ತೆ ಅನ್ಯಾಯವಾದಲ್ಲಿ ಹೋರಾಟ ನಡೆಸಲು ಸಿದ್ಧ ಎಂದು ದೇವೇಗೌಡರು ತಿಳಿಸಿದ್ದಾರೆ.

Leave a Reply

comments

Related Articles

error: