ನಮ್ಮೂರುಮೈಸೂರು

ಮಾರ್ಚ್.19 ಕ್ಕೆ ‘ಅಪ್ಪು ಸಂಭ್ರಮ’ ಸಂಗೀತ ಸಂಜೆ

ಮೈಸೂರು,ಮಾ.12:- ದಿ.ನಟ ಪುನೀತ್ ರಾಜ್ ಕುಮಾರ್ ಅವರ 46 ನೇ ಜನ್ಮ ದಿನದ ಅಂಗವಾಗಿ ಮಾರ್ಚ್.19ರಂದು ‘ಅಪ್ಪು ಸಂಭ್ರಮ’ ಎಂಬ ಸಂಗೀತ ಸಂಜೆ ಕಾರ್ಯಕ್ರಮವನ್ನು ನಗರದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ಪಿ.ಆರ್.ಕೆ ಮ್ಯೂಸಿಕ್ ಆರ್ಕೆಸ್ಟ್ರಾ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿ.ಆರ್.ಕೆ ಮ್ಯೂಸಿಕ್ ಆರ್ಕೆಸ್ಟ್ರಾದ ಬಿ.ಎಸ್.ಜಯರಾಮ ರಾಜು ಮಾತನಾಡಿ, ದಿ.ನಟ ಪುನೀತ್ ರಾಜ್ ಕುಮಾರ್ ಅವರ 46 ನೇ ಜನ್ಮ ದಿನದ ಅಂಗವಾಗಿ ಮಾರ್ಚ್ 19ರಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ‘ಅಪ್ಪು ಸಂಭ್ರಮ’ ಎಂಬ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರವನ್ನು ಇಳೈ ಆಳ್ವಾರ್ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದೊಂದಿಗೆ ಲಯನ್.ಕೆ.ದೇವೇಗೌಡ ಅವರು ಉದ್ಘಾಟನೆ ಮಾಡಲಿದ್ದು ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಕಲಾ ಸೇವಾ ಟ್ರಸ್ಟ್ ಎಂಬ ನೂತನ ಟ್ರಸ್ಟ್ ಅನ್ನು ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ ಅವರು ಉದ್ಘಾಟನೆ ಮಾಡಲಿದ್ದಾರೆ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಡಾ.ರಾಜ್ ಕುಮಾರ್ ಅವರ ಪುತ್ರಿ ಪೂರ್ಣಿಮಾ ರಾಂಕುಮಾರ್, ಮೊಮ್ಮಗಳು ಧನ್ಯರಾಂಕುಮಾರ್, ನಾಯಕ ನಟ ವಿಜಯರಾಘವೇಂದ್ರ, ಕಾಂಗ್ರೆಸ್ ಮುಖುಂಡರಾದ ಕೆ.ಹರೀಶ್ ಗೌಡ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ 47 ಗೀತೆಗಳನ್ನು ನಗರದ ಹೆಸರಾಂತ ಗಾಯಕರು ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜ್ಯೂನಿಯರ್ ಪುನೀತ್ ಅವರ ಆಕರ್ಷಕ ನೃತ್ಯವೂ ಕೂಡ ಇರಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಮತ್ತು ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಮತ್ತು ನೇತ್ರದಾನ ಶಿಬಿರವನ್ನು ಆಯೋಜಿಸಲಾಗಿದೆ. ನೇತ್ರದಾನ ಮಾಡಲಿಚ್ಛಿಸುವವರು ಅಂದೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಕಾರ್ಯಕ್ರಮದಲ್ಲಿ ಕಲಾವಿದರ ಮಕ್ಕಳು ಸೇರಿದಂತೆ ಸರ್ಕಾರಿ ಶಾಲೆಯ 50ಜನ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಟಿಫಿನ್ ಬ್ಯಾಗ್ ಮತ್ತು ನೋಟ್ ಪುಸ್ತಕ, ಜ್ಯಾಮಿಟ್ರಿ ಬಾಕ್ಸ್, 10 ಪೆನ್, 10 ಪೆನ್ಸಿಲ್ ಗಳ ಸೆಟ್ ನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಕಲಾ ಪ್ರೇಕ್ಷಕರಿಗೆ ಮೈಸೂರು ನಗರದ ನಂಜುಮಳಿಗೆಯಲ್ಲಿರುವ ರಾಜಣ್ಣ ಫ್ರೆಸ್ ಜ್ಯೂಸ್ ಸೆಂಟರ್ ನಲ್ಲಿ ಉಚಿತ ಪಾಸ್ ಸೌಲಭ್ಯವಿರುತ್ತದೆ ಎಲ್ಲರೂ ಅಲ್ಲಿ ಪಾಸ್ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕಂಠರಾವ್, ಪ್ರಕಾಶ್, ಗುರುರಾಜ್, ಕಿಚ್ಚಮಹೇಶ್, ಡ್ರಮರ್ ವಿಲಿಯಂ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: