ಕರ್ನಾಟಕಪ್ರಮುಖ ಸುದ್ದಿ

ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ

ರಾಜ್ಯ(ದಾವಣಗೆರೆ )ಮಾ.14:- ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಕಂದಾಯ ದಾಖಲೆ ಮನೆಬಾಗಿಲಿಗೆ ಸರ್ಕಾರದ ದಿಟ್ಟ ಹೆಜ್ಜೆ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಂಸದ ಡಾ. ಜಿ.ಎಂ ಸಿದ್ದೇಶ್ವರ್ ಹೇಳಿದರು.
ಹಳೇಬಾತಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ “ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’’ ಎಂಬ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ರೈತರು ದಿನನಿತ್ಯ ದಾಖಲೆ ಪಡೆಯುವ ಸಲುವಾಗಿ ಕಛೇರಿಗಳಿಗೆ ಅಲೆದಾಡುವುದು ತುಂಬಾ ಕಷ್ಟವಾಗುತ್ತದೆ. ರೈತರಿಗೆ ಅವಶ್ಯಕವಿರುವ ಕಂದಾಯ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವುದರಿಂದ ಈ ರೀತಿಯ ಅಲೆದಾಟ ತಪ್ಪಿಸಿದಂತಾಗುತ್ತದೆ ಎಂಬ ಆಲೋಚನೆಯಿಂದ ರಾಜ್ಯ ಸರಕಾರ ಈ ವಿನೂತನ ಯೋಜನೆ ರೂಪಿಸಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸಕಾಲಕ್ಕೆ ರೈತರು ಪಹಣಿ, ಜಮೀನಿನ ಅಟ್ಲಾಸ್ ನಕ್ಷೆ ಹಾಗೂ ಇನ್ನಿತರ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಎಲ್ಲಾ ಗ್ರಾಮದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ಮಾತನಾಡಿ, ಸರ್ಕಾರದ ಯೋಜನೆಗಳು ಯಾವುದೇ ತೊಂದರೆಯಾಗದಂತೆ ಜನರಿಗೆ ತಲುಪಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ, ಪ್ರತಿಯೊಬ್ಬರು ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, “ಕಂದಾಯ ದಾಖಲೆ ಮನೆ ಬಾಗಿಲಿಗೆ” ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದರಿಂದ ರೈತರಿಗೆ ಒಂದು ಬಾರಿ ಉಚಿತವಾಗಿ ಕಂದಾಯ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ, ಮತ್ತು ಕಛೇರಿಗೆ ಅಲೆದಾಡುವುದು ತಪ್ಪಿಸಿದಂತಾಗುತ್ತದೆ. ಅಲ್ಲದೆ ಕಾರ್ಯಕ್ರಮದಿಂದ ಉಚಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದರಿಂದ ಫಲಾನುಭವಿಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಇದೆ ವೇಳೆ ಫಲಾನುಭವಿಗಳಾದ ಶಂಕ್ರಪ್ಪ, ಹನುಮಂತಪ್ಪ, ಬಿ.ಪಿ ಕೆಂಚಪ್ಪ ರವರ ಮನೆ ಬಾಗಿಲಿಗೆ ಸಾಂಕೇತಿಕವಾಗಿ ಪಹಣಿ, ಜಾತಿ ಪ್ರಮಾಣ ಪತ್ರ, ಜಮೀನಿನ ಅಟ್ಲಾಸ್ ನಕ್ಷೆಯ ದಾಖಲಾತಿಗಳನ್ನು ವಿತರಿಸಲಾಯಿತು.
ಇದೆ ಸಂದರ್ಭದಲ್ಲಿ ತಹಶೀಲ್ದಾರ್ ಬಸವರಾಜ್ ಕೊಟ್ಟೂರು, ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದೇಶ್ ಹಾಗೂ ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: