ಕರ್ನಾಟಕಪ್ರಮುಖ ಸುದ್ದಿಮೈಸೂರು

ವಿಶ್ವನಾಥ್ – ಕುಮಾರಸ್ವಾಮಿ ಹೇಳಿಕೆಯಲ್ಲಿ ತಾಳ ಮೇಳ ; ಜೆಡಿಎಸ್ ಸೇರಲು ನಿರ್ಧರಿಸಿದ್ದಾರಾ ಕಾಂಗ್ರೆಸ್‍ ಕಟ್ಟಾಳು?

ರಾಜ್ಯ (ಪ್ರಮುಖ ಸುದ್ದಿ) ಕೋಲಾರ/ಮೈಸೂರು, ಮೇ 10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಚ್.ವಿಶ್ವನಾಥ್ ಅವರು ಟೀಕಾ ಪ್ರಹಾರ ನಡೆಸಿದ್ದು, “ರಾಜನನ್ನು ಪ್ರಶ್ನಿಸುವ ಹಕ್ಕು ಯಾವುದೇ ಪ್ರಜೆಗಿರುವುದಿಲ್ಲ” ಎಂದು ಹೇಳುವ ಮೂಲಕ ತಮ್ಮ ಸಿಎಂ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕೋಲಾರ ತಾಲ್ಲೂಕು ಗಟ್ಟಹಳ್ಳಿ ಮಠದ ಜಾತ್ರೆಗೆ ಆಗಮಿಸಿದ್ದ ವಿಶ್ವನಾಥ್ ಅವರನ್ನು ಸುದ್ದಿಗಾರರು ಮಾತನಾಡಿಸಿದರು. “ಮುಂದಿನ 2018 ರ ವಿಧಾನಸಭೆ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲೆ ನಡೆಯಲಿದೆ ಮತ್ತು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಅವರು ಹೇಳುತ್ತಿದ್ದಾರಲ್ಲ..? ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ಅವರು, “ಹಾಗಂತ ಸಿದ್ದರಾಮಯ್ಯ ತಮಗೆ ತಾವೇ ಹೇಳಿಕೊಂಡಿದ್ದಾರೆ. ರಾಜನನ್ನ ಪ್ರಶ್ನೆ ಮಾಡಲಾಗುವುದಿಲ್ಲವಲ್ಲಾ” ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

ಜೊತೆಗೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಅವರನ್ನು ಘೋಷಣೆ ಮಾಡುವಂತೆ ಇಂದು ಕೆಲವು ಶಾಸಕರು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನೆ ಆಗಲಿ. ಸದ್ಯಕ್ಕೆ ಆಕಾಂಕ್ಷಿಗಳು ಆಕಾಶ ನೋಡುವಂತಾಗಿದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಮೂಲ ಕಾಂಗ್ರೆಸಿಗರು ಮೂಲೆಗುಂಪು :

ವಿಶ್ವನಾಥ್ ಹೇಳಿಕೆಯಿಂದ ಕಾಂಗ್ರೆಸ್‍ನಲ್ಲಿ ಮೂಲಕಾಂಗ್ರೆಸಿಗರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ದಾರೆ ಎನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿ ಕಾಣುತ್ತಿದೆ. ಎಸ್‍.ಎಂ. ಕೃಷ್ಣ, ಶ್ರೀನಿವಾಸ್ ಪ್ರಸಾದ್ ನಂತರ ಇದೀಗ ವಿಶ್ವನಾಥ್ ಅವರು ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‍ ಬೇರುಗಳು ಸಡಿಲವಾಗುವ ಲಕ್ಷಣಗಳು ಕಾಣುತ್ತಿವೆ.

ವಿಶ್ವನಾಥ್ ನೋವು ತೋಡಿಕೊಂಡಿದ್ದಾರೆ : ಮೈಸೂರಿನಲ್ಲಿ ಕುಮಾರಸ್ವಾಮಿ

ಮೈಸೂರಿನಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಎಚ್.ವಿಶ್ವನಾಥ್ ಅವರು ನನ್ನ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಾಂಗ್ರೆಸ್‍ಗೆ ಸಿದ್ದರಾಮಯ್ಯನವರನ್ನು ಕರೆತಂದವನೇ ನಾನು. ಕಷ್ಟದಲ್ಲಿದ್ದಾಗ ಕೈ ಹಿಡಿದ ನನ್ನನ್ನು ಅವರು ನಡೆಸಿಕೊಂಡ ರೀತಿ ಸರಿಯಲ್ಲ. ನನ್ನನ್ನು ಕಡೆಗಣಿಸಿ ಅಗೌರವ ತೋರಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಬಿಡಲು ನಿರ್ಧರಿಸಿದ್ದೇನೆ” ಎಂದು ವಿಶ್ವನಾಥ್ ತಮಗೆ ತಿಳಿಸಿದ್ದಾರೆ ಎಂದು ಹೇಳಿದರು.

ಇಷ್ಟು ಮಾತ್ರವಲ್ಲದೆ, ವಿಶ್ವನಾಥ್ ಜೆಡಿಎಸ್‍ಗೆ ಬರುವ ಸಮಯವನ್ನು ಅವರೇ ನಿರ್ಧರಿಸುತ್ತಾರೆ. ಎರಡು ಮೂರು ದಿನಗಳಲ್ಲಿ ಅವರ ರಾಜಕೀಯ ನಡೆಯ ಬಗ್ಗೆ ಸ್ಪಷ್ಟ ತೀರ್ಮಾನ ಗೊತ್ತಾಗುತ್ತದೆ ಎನ್ನುವ ಮೂಲಕ ವಿಶ್ವನಾಥ್ ಅವರು ಜೆಡಿಎಸ್ ಸೇರುವುದು ಬಹುತೇಕ ಖಚಿತ ಎಂಬುದನ್ನು ಕುಮಾರಸ್ವಾಮಿ ಪರೋಕ್ಷವಾಗಿ ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್‍ನಿಂದ ರಾಜ್ಯಕ್ಕೆ ಹೊಸದಾಗಿ ಉಸ್ತುವಾರಿಯಾಗಿ ನೇಮಕವಾಗಿರುವ ಕೆ.ಸಿ. ವೇಣುಗೋಪಾಲ್ ರಾವ್ ಅವರನ್ನೂ ಭೇಟಿ ಮಾಡಿರುವ ವಿಶ್ವನಾಥ್, ಸಿಎಂ ಮತ್ತು ಪಕ್ಷದ ಈಗಿನ ರಾಜ್ಯಾಧ್ಯಕ್ಷರು ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ತಮಗೆ ತೀವ್ರ ಬೇಸರ ತರಿಸಿದೆ ಎಂಬುದನ್ನು 5 ಪುಟದ ವಿವರಣೆ ನೀಡಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಈಗ ತಮಗೆ ಉಸಿರುಗಟ್ಟುವ ವಾತಾವರಣವಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಯಾಗಿರುವ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಸವಿವರವಾಗಿ ತಿಳಿಸಿದ ನಂತರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಯಲ್ಲಿ ಯಾವುದೆ ಬದಲಾವಣೆ ಇಲ್ಲವೆಂಬುದು ವಿಶ್ವನಾಥ್ ಅವರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

ಒಟ್ಟಿನಲ್ಲಿ ವಿಶ್ವನಾಥ್ ಅವರು ಕಾಂಗ್ರೆಸ್‍ನಿಂದ ಮಾನಸಿಕವಾಗಿ ದಿನೇ ದಿನೇ ದೂರ ಸರಿಯುತ್ತಿರುವುದು ಸ್ಪಷ್ಟವಾಗಿದ್ದು, ವಿಶ್ವನಾಥ್ ಮತ್ತು ಕುಮಾರಸ್ವಾಮಿಯವರ ಹೇಳಿಕೆಗಳು ಒಂದಕ್ಕೊಂದು ತಾಳ-ಮೇಳದಂತೆ ಹೊಂದಿಕೊಂಡಿಂವೆ. ಕಾಂಗ್ರೆಸ್ ಕಟ್ಟಾಳು ಪಕ್ಷ ಬಿಡಲು ಸಿದ್ಧರಾಗಿದ್ದಾರೆ ಎಂಬ ಮಾತು ಈಗ ಎಲ್ಲೆಡೆ ಜನಜನಿತ.

ವರದಿ: ಎಸ್.ಎನ್/ಎನ್.ಬಿ.ಎನ್.

Leave a Reply

comments

Related Articles

error: