ಕರ್ನಾಟಕಪ್ರಮುಖ ಸುದ್ದಿ

ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಡಾ.ಬಿ.ಸಿ.ಸತೀಶ ಸೂಚನೆ

ರಾಜ್ಯ(ಮಡಿಕೇರಿ),ಮಾ.22:- ಇದೇ ಮಾರ್ಚ್, 28 ರಿಂದ ಏಪ್ರಿಲ್, 11 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆ ಪೂರ್ವ ಸಿದ್ಧತೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ ಅಗತ್ಯ ಮುನ್ನೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯು ಕಾಲ ಕಾಲಕ್ಕೆ ಹೊರಡಿಸುವ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿ ಪರೀಕ್ಷಾ ಸಂದರ್ಭದಲ್ಲಿ ಪರೀಕ್ಷೆ ಕೇಂದ್ರ ಮತ್ತು ಇತರೆ ಸಂದರ್ಭದಲ್ಲಿ ಪೊಲೀಸರ ನಿಯೋಜನೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಮನವಿ ಪತ್ರ ಸಲ್ಲಿಸುವಂತೆ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ ಅವರು ಮಾತನಾಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 37 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಸಂಬಂಧ ಎಲ್ಲಾ ಹಂತದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 6,722 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇವರಲ್ಲಿ 3,306 ಬಾಲಕರು ಹಾಗೂ 3,416 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದರು.
ಮಡಿಕೇರಿ ತಾಲ್ಲೂಕಿನಲ್ಲಿ 1939 ವಿದ್ಯಾರ್ಥಿಗಳು (950 ಬಾಲಕರು, 989 ಬಾಲಕಿಯರು), ಸೋಮವಾರಪೇಟೆ ತಾಲ್ಲೂಕಿನಲ್ಲಿ 2,708 ವಿದ್ಯಾರ್ಥಿಗಳು (1347 ಬಾಲಕರು, 1361 ಬಾಲಕಿಯರು), ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ 2075 ವಿದ್ಯಾರ್ಥಿಗಳು(1009 ಬಾಲಕರು, 1066 ಬಾಲಕಿಯರು) ಪರೀಕ್ಷೆ ಬರೆಯಲಿದ್ದಾರೆ ಎಂದು ವೇದಮೂರ್ತಿ ಅವರು ಮಾಹಿತಿ ನೀಡಿದರು.
ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆ ಸಂಬಂಧ ವೀಕ್ಷಕರು ಹಾಗೂ ಚಾಮರಾಜನಗರ ಡಯಟ್ ಪ್ರಾಂಶುಪಾಲರಾದ ಎಚ್.ಕೆ.ಪಾಂಡು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್, ಕೆ.ವಿ.ಸುರೇಶ್, ಶ್ರೀಶೈಲ ಬೀಳಗಿ, ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಪ್ಪ, ಜಿಲ್ಲಾ ಖಜಾನಾಧಿಕಾರಿ ಪದ್ಮಜಾ, ಪೌರಾಯುಕ್ತರಾದ ರಾಮದಾಸ್, ಸಿಪಿಐ ಮೇದಪ್ಪ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಪರೀಕ್ಷೆ ಕೇಂದ್ರಗಳಿಗೆ ನಿಯೋಜಿಸಿರುವ ಮುಖ್ಯ ಪರೀಕ್ಷೆ ಅಧೀಕ್ಷಕರು, ಅಭಿಯೋಜಕರು, ಮಾರ್ಗ ಅಧಿಕಾರಿಗಳು, ತಾಲ್ಲೂಕು ನೋಡಲ್ ಅಧಿಕಾರಿಗಳು ಇತರರು ಪಾಲ್ಗೊಂಡಿದ್ದರು.
ಕೋವಿಡ್ 19 ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸುವಲ್ಲಿ ಪರೀಕ್ಷಾ ಕೇಂದ್ರವನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಚಗೊಳಿಸುವುದು. ಪರೀಕ್ಷೆ ಮುನ್ನ ಮತ್ತು ನಂತರ ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡುವುದು, ದೈಹಿಕ ಅಂತರ ಕಾಪಾಡುವುದು.
ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ಪರೀಕ್ಷಾರ್ಥಿಗಳು. ಯಾವುದೇ ಪರೀಕ್ಷಾರ್ಥಿಗಳು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತಿಲ್ಲ. ಪ್ರತಿ ಒಬ್ಬರಿಗೂ ಆಸನ ವ್ಯವಸ್ಥೆ ಕಡ್ಡಾಯ. ಪ್ರತಿ ಕೇಂದ್ರದಲ್ಲಿ ಕನಿಷ್ಠ 2 ಪ್ರತ್ಯೇಕ ವಿಶೇಷ ಕೊಠಡಿಗಳನ್ನು ತೆರೆಯುವುದು.
ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸುವುದು. ಅದರಲ್ಲಿ ‘ಥರ್ಮಲ್ ಸ್ಕ್ಯಾನರ್’, ಪಲ್ಸ್ ಆಕ್ಸಿಮೀಟರ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುವಂತೆ ನೋಡಿಕೊಳ್ಳುವುದು. ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಇಡಬೇಕು. ತುರ್ತು ಚಿಕಿತ್ಸಾ ವಾಹನ ಹಾಗೂ ಕೋವಿಡ್ ಕೇರ್ ಸೆಂಟರ್ ತಾಲ್ಲೂಕಿಗೆ ಒಂದರಂತೆ ಕಾಯ್ದಿರಿಸುವುದು. 2 ಡೋಸ್ ಕೋವಿಡ್-19 ಲಸಿಕೆಯನ್ನು ಪಡೆದ ಬಗ್ಗೆ ಖಚಿತಪಡಿಸಿಕೊಂಡು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು. ಕೋವಿಡ್ ಸೋಂಕು ಪಾಸಿಟಿವ್ ಆಗಿರುವ ವಿದ್ಯಾರ್ಥಿಯನ್ನು ಕೋವಿಡ್ ಕೇರ್ ಸೆಂಟರ್‍ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: