
ಕರ್ನಾಟಕಪ್ರಮುಖ ಸುದ್ದಿ
ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಕಳ್ಳತನ ಮಾಡುತ್ತಿದ್ದ ಖದೀಮರನ್ನು ವಶಕ್ಕೆ ಪಡೆದ ರಾಯಚೂರು ಪೊಲೀಸ್
ರಾಜ್ಯ(ರಾಯಚೂರು),ಮಾ.22 : ತಾವು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನಕ್ಕೆ ಕನ್ನ ಹಾಕಿದ್ದ ಖದೀಮ ಕಳ್ಳರನ್ನು ಕೊನೆಗೂ ರಾಯಚೂರು ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಿಖಿಲ್, ಲಕ್ಷ್ಮಿಕಾಂತ್ ಆರೋಪಿಗಳು. ನಗರದ ಸರಫ್ ಬಜಾರ್ನಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರು ಅದೇ ಅಂಗಡಿಯಲ್ಲಿ 11 ಲಕ್ಷ 86 ಸಾವಿರ ರೂ. ಮೌಲ್ಯದ 205 ಗ್ರಾಂ ಚಿನ್ನವನ್ನು ಕದ್ದು ಸಿಕ್ಕಿಬಿದ್ದಿದ್ದಾರೆ.
ಕಳ್ಳತನ ಮಾಡುವಾಗ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾವನ್ನು ಆಫ್ ಆನ್ ಮಾಡುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಸಿಸಿ ಕ್ಯಾಮೆರಾ ಬಂದ್ ಮಾಡಿ ಕಳ್ಳತನ ಮಾಡಿ, ಪುನಃ ಕ್ಯಾಮೆರಾ ಆನ್ ಮಾಡುತ್ತಿದ್ದರು. ಸಿಸಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಿದ ಮಾಲೀಕನಿಗೆ ಅನುಮಾನ ಬಂದು ಪರಿಶೀಲಿಸಿದಾಗ ಚಿನ್ನ ಕಳುವಾಗಿರುವುದು ತಿಳಿದಿದೆ. ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊನೆಗೂ ಪೊಲೀಸರು ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಪ್ರತ್ಯೇಕ ಪ್ರಕರಣಗಳಲ್ಲಿ ನಗರದ ಪಶ್ಚಿಮ ಠಾಣೆ, ನೇತಾಜಿ ನಗರ ಠಾಣೆ ಹಾಗೂ ಆಂಧ್ರಪ್ರದೇಶದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಮನೆಕಳ್ಳತನ ಮಾಡುತ್ತಿದ್ದ ಆರೋಪಿ ನೆಹಮೀಯಾಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರತ್ಯೇಕ ಪ್ರಕರಣಗಳಿಂದ 12 ಲಕ್ಷ 50 ಸಾವಿರ ಮೌಲ್ಯದ 250 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.(ಎಸ್.ಎಂ)