ದೇಶಪ್ರಮುಖ ಸುದ್ದಿ

ಮುಂಗಾರು ಮಳೆ ಆರ್ಭಟ ಸಂಭವ : ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ

ರಾಜ್ಯ-ದೇಶ, (ಪ್ರಮುಖ ಸುದ್ದಿ) ನವದೆಹಲಿ : ದೇಶದಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ಫೆಸಿಫಿಕ್ ಮಹಾಸಾಗರದಿಂದ ಎದ್ದು ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದತ್ತ ಹೊರಡುವ ಎಲ್‍ನಿನೊ ಬಿಸಿ ಮಾರುತವು ಈ ಬಾರಿ ಕೊಂಚ ದುರ್ಬಲವಾಗಿರುವುದರಿಂದ ಅರಬ್ಬೀ ಸಮುದ್ರದಿಂದ ಏಳುವ ಮಾನ್ಸೂನ್ ಮಾರುತವು ಭಾರತದತ್ತ ತಡೆಯಿಲ್ಲದೆ ಚಲಿಸಲಿದೆ. ಮತ್ತು ಇದರಿಂದ ಭಾರತದಲ್ಲಿ ಶೇ. 96 ರಷ್ಟು ಮಳೆಯಾಗುವ ನಿರೀಕ್ಷ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಕೆ.ಜೆ.ರಮೇಶ್ ಅವರು ತಿಳಿಸಿದ್ದಾರೆ.

ಹೀಗಿದ್ದರೂ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ ಎಂದಿರುವ ಹವಾಮಾನ ಇಲಾಖೆ ಅಧಿಕಾರಿಗಳು, ಒಟ್ಟಾರೆ ಮಳೆಯ ಪ್ರಮಾಣವು ಎಲ್‍ನಿನೊ ಮತ್ತು ಹಿಂದೂಮಹಾಸಾಗರದ ಮಾರುತಗಳ ಬದಲಾವಣೆಯನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ. ಫೆಸಿಫಿಕ್ ಸಾಗರದ ಕಡೆಯಿಂದ ಬೀಸುವ ಮಾರುತವು ಹಿಂದೂ ಮಹಾ ಸಾಗರದ ಪಶ್ಚಿಮ ಭಾಗದಲ್ಲಿ ಒತ್ತಡ ತರಲಿದ್ದು, ಅರಬ್ಬೀ ಸಮುದ್ರ ಮತ್ತು ಅದರ ದಕ್ಷಿಣ ಭಾಗದಲ್ಲಿ ಬಿಸಿ ಮತ್ತು ಶೀತ ವಾತಾವಣಕ್ಕೆ ಕಾರಣವಾಗುತ್ತದೆ. ಈ ರೀತಿ ಆದಾಗ ಅರಬ್ಬೀ ಸಮುದ್ರಗಳಿಂದ ಏಳುವ ಮಾರುತಗಳು ಮಾನ್ಸೂನ್ ಮಾರುತಗಳ ಚಲನೆಯ ಮೇಲೆ ಪರಿಣಾಮ ಬೀರುತ್ತವೆ.

ಫೆಸಿಫಿಕ್ ಮಹಾ ಸಾಗರದಿಂದ ಎಲ್‍ನಿನೊ ಮಾರುಗಳು ಈ ಬಾರಿ ಬೇಗನೇ ಆರಂಭವಾಗಿ ದುರ್ಬಲವಾಗಿದೆ, ಹೀಗಾಗಿ ಜೂನ್ ಮೊದಲ ವಾರದಲ್ಲಿ ಕೇರಳದ ಮೂಲಕ ಭಾರತ ಪ್ರವೇಶಿಸಿಸಬೇಕಿದ್ದ ಮಾನ್ಸೂನ್ ಮಾರುತಗಳು ಮೇ ಕೊನೆಯ ವಾರದಲ್ಲೇ ಆಗಮಿಸುವ ಸಾಧ್ಯತೆ ಇದೆ. ಪರಿಸ್ಥಿತಿಗೆ ಅನುಗುಣವಾಗಿ ಶೇ. 100 ರಷ್ಟು ಮಳೆಯಾದರೂ ಆಗಬಹುದು. ದೇಶದಲ್ಲಿ ಗೋಧಿ ಮತ್ತು ಭತ್ತ ಬೆಳೆಯುವ ಪ್ರದೇಶದ ರೈತರು ಮುಂಜಾಗ್ರತೆ ವಹಿಸಬೇಕು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಶಕದ ಹಿಂದೆ ಮಳೆಯಿಂದಾಗಿ ದೇಶದ ಮಹಾನಗರಗಳಾದ ಮುಂಬೈ, ಬೆಂಗಳೂರು, ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅಪಾರ ಆಸ್ತಿಪಾಸ್ತಿ – ಪ್ರಾಣಹಾನಿ ಸಂಭವಿಸಿತ್ತು. ಈ ದೃಷ್ಟಿಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಒಳಿತು.

– ಎನ್.ಬಿ.ಎನ್.

Leave a Reply

comments

Related Articles

error: