ಕರ್ನಾಟಕಮೈಸೂರು

ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ನಿರ್ಬಂಧವಿದ್ದಾಗ್ಯೂ ಪ್ರವೇಶ: ಪೊಲೀಸರ ದಿವ್ಯ ನಿರ್ಲಕ್ಷ್ಯ

ಅಕ್ಟೋಬರ್ 1ರಿಂದ 16ರ ವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8.30 ರ ವರೆಗೆ ತಾವರೆಕಟ್ಟೆ ಬಳಿಯಿಂದ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದ್ದರೂ, ಭಾನುವಾರ ಯಾವುದೇ ತಡೆಯಿಲ್ಲದೆ ವಾಹನಗಳು ಸಂಚರಿಸುತ್ತಿದ್ದುದು ಕಂಡುಬಂತು.

ನಿನ್ನೆ (ಅ.1) ಬೆಟ್ಟದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮವಿದ್ದ ಕಾರಣ ಈ ಮೊದಲಿನ  ಆದೇಶ ಸಡಿಲಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಭಾನುವಾರ ಮುಂಜಾನೆಯಿಂದಲೇ ನಿರ್ಬಂಧವಿದ್ದರೂ ಖಾಸಗಿ ವಾಹನಗಳು ಸಂಚರಿಸುತ್ತಿದ್ದವು. ಆದರೆ ಪೊಲೀಸರು ಯಾವುದೆ ಕ್ರಮಕೊಳ್ಳದೇ ಇದ್ದುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು.

ಚಾಮುಂಡೀ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಪ್ರತಿದಿನವೂ ಸಹಸ್ರಾರು ಭಕ್ತರು ಬರುತ್ತಲೇ ಇರುತ್ತಾರೆ. ದಸರಾ ಸಂದರ್ಭದಲ್ಲಂತೂ ದೇವಳಕ್ಕೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಿದ್ದು ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಕಂಡುಬರುತ್ತದೆ ಎಂಬ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಸಾರ್ವಜನಿಕರಿಗೆ ಲಲಿತಮಹಲ್ ಹೆಲಿಪ್ಯಾಡ್ ಬಳಿಯಿಂದ ಚಾಮುಂಡಿಬೆಟ್ಟಕ್ಕೆ ಉಚಿತ ಸಾರಿಗೆ ಬಸ್ಸುಗಳ ಸೇವೆಯನ್ನು ಜಿಲ್ಲಾಡಳಿತ ವ್ಯವಸ್ಥೆಗೊಳಿಸಿದ್ದು, ಸಾರ್ವಜನಿಕರು ಬರುವ ವಾಹನಗಳಿಗೆ ಲಲಿತಮಹಲ್ ಹೆಲಿಪ್ಯಾಡ್ ಬಳಿ ಇರುವ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕರು ಅವರ ವಾಹನಗಳನ್ನು ಇಲ್ಲಿಯೇ ನಿಲ್ಲಿಸಿ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆಗೊಳಿಸಿರುವ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಬೇಕು ಎನ್ನುವುದು ಜಿಲ್ಲಾಡಳಿತದ ಸೂಚನೆ.

ಅತ್ತ ಹೆಲಿಪ್ಯಾಡ್ ಬಳಿ ಸರ್ಕಾರಿ ಬಸ್ಸುಗಳೆರಡು ಪ್ರಯಾಣಿಕರಿಗಾಗಿ ಕಾಯುತ್ತಿದ್ದರೆ, ಇತ್ತ ಸಾರ್ವಜನಿಕರು ತಮ್ಮ ವಾಹನವನ್ನೇ ಬೆಟ್ಟಕ್ಕೂ ಕೊಂಡೊಯ್ಯುತ್ತಿದ್ದಾರೆ. ದಸರಾ ಹೊರತು ಪಡಿಸಿ ಉಳಿದ ದಿನಗಳಲ್ಲಿಯೇ ಬೆಟ್ಟಕ್ಕೆ ಹೋಗುವ ಮುನ್ನ ಅರ್ಧದಲ್ಲೇ ಕೈ ಮಾಡಿ ವಾಹನವನ್ನು ಇಲ್ಲೇ ಬಿಡಿ ಎಂದು ಹೇಳುವ ಪೊಲೀಸರು ಜಿಲ್ಲಾಡಳಿತದ ಸೂಚನೆ ಇದ್ದಾಗ್ಯೂ ಖಾಸಗಿ ವಾಹನ ಪ್ರವೇಶಕ್ಕೆ ಅನುವು ಮಾಡಿ ಕೊಟ್ಟಿರುವುದು ಪೊಲೀಸರ ದಿವ್ಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.

Leave a Reply

comments

Related Articles

error: