
ಕರ್ನಾಟಕಪ್ರಮುಖ ಸುದ್ದಿ
ಬಿಬಿಎಂಪಿ ಜಂಟಿ ಕಮಿಷನರ್ ಮೇಲೆ ಎಫ್.ಐ.ಆರ್ : ಮಾನಸಿಕ ಮತ್ತು ವರದಕ್ಷಿಣೆ ಕಿರುಕುಳ ಕೇಸ್ ದಾಖಲು
ರಾಜ್ಯ(ಬೆಂಗಳೂರು),ಮಾ.31 : – ಬಿಬಿಎಂಪಿ ಜಂಟಿ ಕಮಿಷನರ್ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದ್ದು, ದಕ್ಷಿಣ ವಿಭಾಗ ಜಂಟಿ ಕಮಿಷನರ್ ವೀರಭದ್ರಸ್ವಾಮಿಗೆ ಸಂಕಷ್ಟ ಎದುರಾಗಿದೆ. ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದಾಗಿ ನಂಬಿಸಿ ಮತ್ತೊಬ್ಬರನ್ನು ಮದುವೆಯಾಗಿದ್ದು, ವಿಚ್ಛೇದನ ಕೋರಿರುವುದಾಗಿ ಸುಳ್ಳು ಹೇಳಿ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಫೆಬ್ರವರಿ 14ರಂದು ಹುಳಿಮಾವು ಚೌಡೇಶ್ವರಿ ದೇಗುಲದಲ್ಲಿ ಮದುವೆಯಾಗಿದ್ದು, ಇದೀಗ ಬಸವನಗುಡಿ ಮಹಿಳಾ ಠಾಣೆಗೆ ಎರಡನೇ ಪತ್ನಿ ದೂರು ನೀಡಿದ್ದಾರೆ. ಜೆಪಿನಗರದ ನಿವಾಸಿ 44 ವರ್ಷದ ಮಹಿಳೆ ಕೊಟ್ಟ ದೂರಿನ ಮೇಲೆ ಕೇಸ್ ದಾಖಲಿಸಲಾಗಿದ್ದು, 2020ರಲ್ಲಿ ಪರಿಚಯವಾಗಿದ್ದು, ವೀರಭದ್ರಸ್ವಾಮಿ ಪ್ರೀತಿ ನಿವೇದನೆ ಮಾಡಿದ್ದಾರೆ. ಮೊದಲ ಪತ್ನಿ, ಮಕ್ಕಳಿಂದ 11 ವರ್ಷದಿಂದಲೂ ದೂರ ಇದ್ದೇನೆ ಎಂದು ಹೇಳಿದ್ದು, ಇದನ್ನು ನಂಬಿ 44 ವರ್ಷದ ಮಹಿಳೆ ಮದುವೆ ಆಗಲು ಒಪ್ಪಿದ್ದರು. ಪರಿಚಿತರು, ಸಂಬಂಧಿಕರ ಸಮ್ಮುಖದಲ್ಲಿ ಇಬ್ಬರ ಮದುವೆ ನಡೆದಿದ್ದು, ಮೊದಲ ಪತ್ನಿ, ಮಕ್ಕಳ ಜತೆ ಸ್ವಾಮಿ ಸಂಸಾರ ನಡೆಸ್ತಿರೋದು ಕೆಲ ದಿನದಲ್ಲೇ ಪತ್ತೆಯಾಗಿದೆ.
ಇದನ್ನು ಪ್ರಶ್ನಿಸಿದ್ದಕ್ಕೆ ವೀರಭದ್ರಸ್ವಾಮಿ ಮೊಬೈಲ್ ಸ್ವಿಚ್ಆಫ್ ಮಾಡಿದ್ದಾರೆ, ನನ್ನ ಸಂಪರ್ಕಕ್ಕೆ ಸಿಗದೇ ಓಡಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಐಪಿಸಿ 498(A )ಮಾನಸಿಕ ಮತ್ತು ವರದಕ್ಷಿಣೆ ಕಿರುಕುಳ, 417 – ವಂಚನೆ ಕೇಸ್ ದಾಖಲಿಸಲಾಗಿದ್ದು, ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಹಾಕಲಾಗಿದೆ. ಎಫ್ಐಆರ್ ಸಂಬಂಧ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದಾರೆ.(ಎಸ್.ಎಂ)