ಮೈಸೂರು

ವಚನಕಾರರು ತಮ್ಮ ವಚನಗಳ ಮೂಲಕ,ಜೀವನ ಶೈಲಿಯ ಮೂಲಕ ಮಾರ್ಗದರ್ಶಕರಾಗಿದ್ದಾರೆ : ನಾಜೀಯಾ ಸುಲ್ತಾನ

ಮೈಸೂರು, ಏ.1:- ಶ್ರೀ ಹೊಸಮಠದಲ್ಲಿ ವ್ಯೋಮಮೂರುತಿ ಅಲ್ಲಮಪ್ರಭು ಜಯಂತಿ ಮತ್ತು ಚರಮೂರ್ತಿ ಆಸ್ಥಾನ ವಿದ್ವಾನ್ ನಿ.ಪ್ರ.ಸ್ವ. ಶ್ರೀ ಬಸವಲಿಂಗಸ್ವಾಮಿಗಳವರ 71ನೆಯ ಪುಣ್ಯಾರಾಧನೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾದ ನಾಜೀಯಾ ಸುಲ್ತಾನ  ಅವರು ಮಾತನಾಡಿ 12ನೇ ಶತಮಾನದ ಶರಣರನ್ನು ಅಂದಿನಿಂದ ಇಂದಿನವರೆಗೂ ಜಗತ್ತಿನಾದ್ಯಂತ ಅನುಸರಿಸುವವರಿದ್ದಾರೆ. ಅನುಭವ ಮಂಟಪದಲ್ಲಿ ಪುರುಷ ಮಹಿಳೆಯರಿಗೆ ಸಮಾನ ಗೌರವವನ್ನು ನೀಡಿದಂತಹ ಕಾಲ. ವಚನ ಸಾಹಿತ್ಯ ಸಮಾಜವನ್ನು ತಿದ್ದುವ ಪ್ರಯತ್ನ ಮಾಡುವಲ್ಲಿ ಪ್ರಾಮುಖ್ಯತೆ ಪಡೆದಿದೆ. ವಚನಕಾರರು ತಮ್ಮ ವಚನಗಳ ಮೂಲಕ ಹಾಗೂ ಅವರ ಜೀವನ ಶೈಲಿಯ ಮೂಲಕ ಜನರಿಗೆ ಮಾರ್ಗದರ್ಶಕರಾಗಿದ್ದಾರೆ. ನಮ್ಮ ಪ್ರತಿಯೊಂದು ರಂಗದಲ್ಲೂ ವಚನಕಾರರು ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ನಮ್ಮ ಯೋಚನ ಶಕ್ತಿಗಳನ್ನು ಬದಲಿಸಿಕೊಂಡು ಜೀವನದ ಸಾಮರಸ್ಯಗಳನ್ನು ಅರ್ಥಮಾಡಿಕೊಂಡು ಬದುಕಲು ಕಾರಣರಾಗಿದ್ದಾರೆ. ತಂದೆ ತಾಯಿಗಳಿಗೆ ನಮ್ಮ ಮೇಲೆ ನಂಬಿಕೆ ಬರುವ ಹಾಗೆ ನಡೆದುಕೊಂಡು ಮರಳಿ ಮನೆಗೆ ಹೋಗುವಾಗ ನಮ್ಮ ಮೇಲೆ ತಪ್ಪು ತಿಳುವಳಿಕೆ ಬಾರದ ರೀತಿಯಲ್ಲಿ ಹೋಗಬೇಕು. ದೈಹಿಕವಾಗಿ, ಮಾನಸಿಕವಾಗಿ ನಾವು ಸದೃಢರಾಗಿ ನಮ್ಮ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ನಾವಿದ್ದೇವೆ ಎಂದು ಹೇಳಿದರು. ನಮ್ಮ ಪೂಜ್ಯ ರಾದ ಚಿದಾನಂದ ಮಹಾಸ್ವಾಮಿಗಳವರು ಸಮಾಜದ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿದವರಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಯುವ ಜನತೆಯಲ್ಲಿ ಶರಣರ ಚಿಂತನೆಗಳ ಬಗ್ಗೆ ಅರಿವನ್ನು ಮೂಡಿಸಲು ಸಹಾಯಕವಾಗಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯ ಬೇಡ ಎಂಬ ಬಸವಣ್ಣನವರ ವಚನಗಳ ಮೂಲಕ ನಮ್ಮ ಜೀವನವನ್ನು ನಾವು ಬದಲಿಸಿಕೊಳ್ಳಬಹುದು. ಜಾತಿ, ಮತ, ಧರ್ಮ, ಭಾಷೆಯನ್ನು ಮೀರಿದ್ದು, ವಚನ ಸಾಹಿತ್ಯ. ವಚನಕಾರರ ಮಾತುಗಳನ್ನು ಕೇಳಿದರೆ ಅಸಾಧ್ಯವಾದದು ಕೂಡ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಲ್ಲಮನ-ವೈಚಾರಿಕತೆ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ, ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು ಇವರು ಮಾತನಾಡಿ ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿದೆತ್ತ ಸಂಬಂಧವಯ್ಯಾ ಎಂಬ ವಚನದಂತೆ ಮನಸ್ಸು, ಮಾತು, ರುಚಿ ಎಲ್ಲವೂ ಬೇರೆ ಬೇರೆ, ಎರಡು ದ್ವೀಪಗಳ ನಡುವಿನ ನೀರಿಗೆ ಹೇಗೆ ಸಂಬಂಧವಿದೆಯೋ ನಮ್ಮ ದೇಹ, ಬುದ್ಧಿ, ಮಾತು ಎಲ್ಲವನ್ನು ನೋಡಿದರೆ ಅದೇ ಒಂದು ಸಂಬಂಧವೆನಿಸುತ್ತದೆ. ಎಲ್ಲರ ಗುಣಗಳಿಗೂ ನಾವು ಮಹತ್ವ ನೀಡಬೇಕು. ಭೂಮಿ, ಆಕಾಶ ಎಲ್ಲದರ ನಡುವೆ ಒಂದು ಸಂಬಂಧವಿರುವ ಹಾಗೆ. ಇಲ್ಲಿ ಅನ್ಯರು ಯಾರು ಇಲ್ಲ. ಧರ್ಮ, ವೇದ, ಶಾಸ್ತ್ರ ನಮ್ಮ ಸತ್ಯವನ್ನು ನಾವೇ ಕಾಣಬೇಕು. ಇಲ್ಲಿ ಯಾವುದು ನನ್ನದಲ್ಲ, ನಮ್ಮ ಲಾಭಕ್ಕಾಗಿ ಏನನ್ನು ಮಾಡಬಾರದು. ಅಲ್ಲಮ ಪ್ರಭುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರ ವಚನಗಳನ್ನು ಅರ್ಥಮಾಡಿಕೊಳ್ಳಬೇಕು. ಇವರ ವಚನಗಳಲ್ಲಿ ಸಾಮಾಜಿಕ ನ್ಯಾಯಬದ್ಧತೆ ಕಾಣಿಸಿಕೊಳ್ಳುವುದರ ಜೊತೆಗೆ ಬಾಹ್ಯ ಜಗತ್ತಿನ ಮೌಢ್ಯಗಳನ್ನು ನೇರವಾಗಿ ತೆಗಳಿದ ವ್ಯಕ್ತಿ. ಮನಸ್ಸಿನ ಸೌಂದರ್ಯವನ್ನು ಜಾಗೃತಗೊಳಿಸಬೇಕು ಆಗ ಮಾತ್ರ ಬದುಕು ಸುಂದರವಾಗುವುದಕ್ಕೆ ಸಾಧ್ಯ. ನಮ್ಮೊಳಗಿನ ಭಗವಂತನನ್ನು ಹೊರ ತರುವ ಪ್ರಯತ್ನ ಮಾಡಬೇಕು. ಆಸೆ, ದ್ವೇಷ ಎರಡನ್ನು ಬಿಟ್ಟವನ್ನು ಈಶನಾಗುತ್ತಾನೆ ಎಂದು ನಂಬಿದವರು ಅಲ್ಲಮಪ್ರಭುಗಳು. ಶರಣರ ಪರಂಪರೆಯಲ್ಲಿ ಬೆಳೆದು ಬಂದದ್ದು ಕನ್ನಡ ನಾಡು. ಮನಸ್ಸಿನ ವಿಕಲ್ಪಗಳನ್ನು ತೊಡೆದು ಹಾಕಿದಾಗ ಮೋಕ್ಷ ಲಭಿಸುತ್ತದೆ. ಸಹಜತೆಯಲ್ಲಿ ಬದುಕನ್ನು ರೂಪಿಸಿದವರು ಅಂತಹ ಸಹಜತೆಯ ಬದುಕನ್ನು ನಾವೆಲ್ಲರೂ ರೂಪಿಸಿಕೊಳ್ಳಬೇಕೆನ್ನುವುದರ ಮೂಲಕ ಅಲ್ಲಮ ಪ್ರಭುಗಳ ಹಲವಾರು ವಚನಗಳನ್ನು ವ್ಯಾಖ್ಯಾನ ಮಾಡಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ನಿ.ಪ್ರ.ಸ್ವ. ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು., ಚಿದರಚಳ್ಳಿ ಗವಿಮಠ, ಟಿ. ನರಸೀಪುರ ಇವರು ಆಶೀರ್ವಚನ ನೀಡಿ ಹೆಣ್ಣು, ಹೊನ್ನು,ಮಣ್ಣು ಈ ಮೂರನ್ನು ಬಿಟ್ಟು ಬದುಕಲು ಸಾಧ್ಯವಾದದ್ದು ಅಲ್ಲಮ ಪ್ರಭುವಿಗೆ ಮಾತ್ರ. ಸ್ಥಾನ, ಸಂದರ್ಭ ಮನಸ್ಥಿತಿಗಳಿಗೆ ಅನುಗುಣವಾಗಿ ವಚನಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಅಲೋಚನೆಯ ಮಟ್ಟ ಅಲ್ಲಮ ಪ್ರಭುಗಳ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲದಿದ್ದರು ಅವರ ವಚನಗಳ ಮಹತ್ವವನ್ನು ಅರಿಯುವ ಪ್ರಯತ್ನಗಳನ್ನು ಮಾಡಬೇಕು. ನೇರ ದಿಟ್ಟ, ನಿರಂತರವಾಗಿ ಸಮಾಜದ ಪ್ರತಿಯೊಂದರ ಬಗ್ಗೆ ನಿರ್ಭೀತಿಯಿಂದ ಆಸ್ತಿಕ ಮತ್ತು ನಾಸ್ತಿಕ ಚಿಂತನೆಗಳಿಗೆ ಹೊರತಾದ ಅಲೋಚನೆಗಳನ್ನು ನೀಡಿದ ಮಹನೀಯರು. ನಿರಾಕಾರ, ನಿರಾಡಂಬರಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು, ಬಾಹ್ಯ ಅಡಂಬರಗಳನ್ನು ತಿದ್ದುವ ಕಾಯಕ ಮಾಡಿದವರು ಎಂದರು.

ನಿ. ಪ್ರ. ಸ್ವ.  ಚಿದಾನಂದಮಹಾಸ್ವಾಮಿಗಳು, ಅಧ್ಯಕ್ಷರು, ಶ್ರೀ ಹೊಸಮಠ ಇವರು  ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದರು.  ದಾಸೋಹದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಚೂಡಾಮಣಿ ಪ್ರಾರ್ಥಿಸಿದರೆ  ಪುಷ್ಪ ಕೆ.ಎಸ್., ವಾಣಿಜ್ಯಶಾಸ್ತ್ರ ಉಪನ್ಯಾಸಕರು, ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು, ಮೈಸೂರು ಸ್ವಾಗತಿಸಿದರು.   ಸುನೀತಾ ರಾಣಿ ವಿ.ಡಿ., ಪ್ರಾಂಶುಪಾಲರು ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜು, ನಿರೂಪಿಸಿದರೆ,  ರಾಧ ಆರ್. ಉಪನ್ಯಾಸಕರು, ರಾಜ್ಯಶಾಸ್ತ್ರ ವಿಭಾಗ, ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು, ಮೈಸೂರು ಎಲ್ಲರನ್ನೂ ವಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: