ಮೈಸೂರು

ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಸಮಯದ ಕೊರತೆ ನಿವಾರಣೆ: ನ್ಯಾ‌.ಎಂ.ಎಲ್.ರಘುನಾಥ್

ಮೈಸೂರು, ಏ.9. :- ವರ್ಚುವಲ್ ಸಭೆಯ ಮೂಲಕ ಸಮಯ, ಹಣ ಉಳಿತಾಯವಾಗುವುದರ ಜೊತೆಗೆ ಕಕ್ಷಿದಾರರಿಗೂ ರಕ್ಷಣೆಯ ಭಾವನೆ ಮೂಡುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಲ್.ರಘುನಾಥ್ ಅವರು ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಮೈಸೂರು ಜಿಲ್ಲಾ ಅಭಿಯೋಜನಾ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಡೆದ ಅಭಿಯೋಜನೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕಲಂ 293 ದಂಡಾ ಪ್ರಕ್ರಿಯೆ ಸಂಹಿತೆಯಡಿಯಲ್ಲಿ ನೀಡಲಾದ ತಜ್ಞರ ವರದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕ್ಷ್ಯ ನೀಡುವಾಗ ಪಾಲಿಸಬೇಕಾದ ಕ್ರಮಗಳು ಮತ್ತು Rules for video conferencing in Courts ನಿಯಮಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಂಸದೀಯ ಸ್ಥಾಯಿ ಸಮಿತಿ ಮತ್ತು ವೈಯುಕ್ತಿಕ ಸಾರ್ವಜನಿಕ ಕುಂದುಕೊರತೆಗಳ ಕಾನೂನು ಮತ್ತು ನ್ಯಾಯ ಸಮಿತಿಯು ನೀಡಿರುವ ವರದಿಯ ಮೇರೆಗೆ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಚುವಲ್ ಸಭೆಗಳನ್ನು ಅಳವಡಿಸಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.

ಕೋವಿಡ್ 19 ಬರುವ ಮುಂಚೆಯೇ ಈ ವರ್ಚುವಲ್ ಸಭೆಗಳನ್ನು ನಡೆಸಲಾಗುತ್ತಿತ್ತು. ಆದರೆ ಕೋವಿಡ್ 19 ವ್ಯಾಪಕವಾಗಿ ಹರಡಿದ್ದರಿಂದ ವರ್ಚುವಲ್ ಸಭೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಿದೆ. ಅದಕ್ಕೆ ಸಂಸದೀಯ ಸ್ಥಾಯಿ ಸಮಿತಿ ಮತ್ತು ವೈಯಕ್ತಿಕ ಸಾರ್ವಜನಿಕ ಕುಂದುಕೊರತೆಗಳ ಕಾನೂನು ಮತ್ತು ನ್ಯಾಯ ಸಮಿತಿಯೇ ಕಾರಣವಾಗಿದೆ ಎಂದು ಹೇಳಿದರು.

ಇಂದು ಎಲ್ಲಾ ನ್ಯಾಯಾಲಯಗಳಲ್ಲಿ ವರ್ಚುವಲ್ ಸಭೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಸಿ.ಎ. ಸಿಸ್ಟಮ್ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಎಷ್ಟು ಪ್ರಕರಣಗಳು ಉಳಿದಿದೆ. ಎಷ್ಟು ಪ್ರಕರಣಗಳು ವಿಲೇವಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ವರ್ಚುವಲ್ ಕೊಸ್೯ ಎಂದರೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ವರ್ಚುವಲ್ ಕೋಸ್೯ಗಳಲ್ಲಿ ವಕೀಲರು ಪ್ರಕರಣಗಳನ್ನು ದಾಖಲು ಮಾಡಬೇಕಾದರೆ ಸಂಬಂಧಪಟ್ಟ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ಐಡಿಗೆ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ವಿಡಿಯೋ ಸಭೆಯನ್ನು ಎರಡು ವಿಧದಲ್ಲಿ ರೆಕಾಡ್೯ ಮಾಡಿಕೊಳ್ಳಲಾಗುತ್ತದೆ ಎಂದರು.

ಇ-ಕೋಟ್ಸ್೯ ಗಳನ್ನು ತೆರೆಯಬೇಕೆಂದು ಸುಪ್ರೀಂ ಕೋಟ್ ಹಾಗೂ ಕೇಂದ್ರ ಸರ್ಕಾರ ನಿರ್ದೇಶಕನ ನೀಡಲಾಗಿದೆ‌. ಇದರಿಂದ ಮುಂದಿನ ದಿನಗಳಲ್ಲಿ ಇ ಕೋಟ್ಸ್೯ ಮೂಲಕ ವ್ಯವಹರಿಸಬೇಕಾಗುತ್ತದೆ. ಇದರಿಂದ ಕಕ್ಷಿದಾರರಾಗಲಿ, ವಕೀಲರಾಗಲಿ ನ್ಯಾಯಾಲಯಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಆರ್.ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರ್.ಚೇತನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್, ಮೈಸೂರು ವಲಯದ ಕಾನೂನು ಅಧಿಕಾರಿ ಎಂ.ಎಸ್.ಮಂಜುಳ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಹೆಚ್.ಇ.ಚಿನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: