
ಕರ್ನಾಟಕಪ್ರಮುಖ ಸುದ್ದಿ
ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ತುಂಬಾ ನೋವು ತರಿಸಿದೆ ; ರಾಜವಂಶಸ್ಥ ಯದುವೀರ್ ಒಡೆಯರ್
ರಾಜ್ಯ(ಆನೇಕಲ್),ಏ.14 :- ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ತುಂಬಾ ನೋವು ತರಿಸಿದೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಬದುಕಬೇಕು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ನಿನ್ನೆ ಆನೇಕಲ್ ಪಟ್ಟಣದಲ್ಲಿ ನಡೆದ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದ ರಾಜಮುಡಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿ, ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿ ಮೂಡಬೇಕು. ಜಾತಿಗಳ ಒಳಗೆ ಸಂಘರ್ಷಗಳು ನಡೆಯಬಾರದು. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳು ಇನ್ನು ಮುಂದೆ ನಡೆಯದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಹೇಳಿದ್ದಾರೆ. ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಆನೇಕಲ್ ಹಾಗೂ ಮೈಸೂರಿಗೆ ಈ ಹಿಂದೆ ಸಂಬಂಧ ಇತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ. ಇದರಿಂದಾಗಿ ಆನೇಕಲ್ ಪಟ್ಟಣದ ಶ್ರೀ ತಿಮ್ಮರಾಯ ಸ್ವಾಮಿ ದೇವಾಲಯದಲ್ಲಿ ರಾಜಮುಡಿ ಉತ್ಸವವನ್ನು ಹಮ್ಮಿಕೊಂಡು ಆಹ್ವಾನ ನೀಡಿದ್ದಾರೆ. ನಾನು ತುಂಬಾ ಸಂತೋಷದಿಂದ ಇಲ್ಲಿಗೆ ಆಗಮಿಸಿ ಪೂಜೆಯಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.(ಎಸ್.ಎಂ)