ಕರ್ನಾಟಕಪ್ರಮುಖ ಸುದ್ದಿ

ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪ

ರಾಜ್ಯ(ಮಡಿಕೇರಿ) ಏ.15:-‘ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರದ ದೊಡ್ಡ ಶಕ್ತಿ, ಎಲ್ಲರೂ ಆರಾಧಿಸುವ ಜ್ಞಾನಿ. ಆ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳು ಪ್ರತಿಯೊಬ್ಬರ ಜೀವನಕ್ಕೆ ಮಾರ್ಗದರ್ಶಿ ಹಾಗೂ ದಾರಿದೀಪವಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೇಳಿದ್ದಾರೆ.’
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಮತ್ತು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲಿಯೇ ಮಾದರಿ ಹಾಗೂ ಅತ್ಯಂತ ಶ್ರೇಷ್ಠ ಸಂವಿಧಾನನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಅವರು ಪ್ರತಿಪಾದಿಸಿದರು.
ಜನಪ್ರತಿನಿಧಿಗಳು, ಅಧಿಕಾರಿಗಳು, ಹೀಗೆ ಪ್ರತಿಯೊಬ್ಬ ಭಾರತೀಯ ನಾಗರಿಕರೂ ಸಂವಿದಾನಬದ್ಧ ಹಕ್ಕು ಪಡೆಯುವುದರ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಒತ್ತಿ ಹೇಳಿದರು.
ಭಾರತದ ಸಂವಿಧಾನದ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸಂವಿಧಾನ ನೀಡಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಆ ನಿಟ್ಟಿನಲ್ಲಿ ವಿಶ್ವದಲ್ಲಿ 143 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಭಾರತದ ಸಂವಿಧಾನದಲ್ಲಿ ಭಾರತೀಯರು ತಮಗೆ ಇಷ್ಟ ಬಂದ ಧರ್ಮವನ್ನು ಆಚರಿಸಲು ಅವಕಾಶ ಇದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ದುರುಪಯೋಗ ಆಗುವುದನ್ನು ಕಾಣುತ್ತೇವೆ. ಇದು ತಪ್ಪಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯಪಟ್ಟರು.
‘ಸಮಾಜದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳು ಇವೆ, ಇದನ್ನೆ ಬಂಡವಾಳ ಮಾಡಿಕೊಂಡು ಹಾದಿ ತಪ್ಪಿಸುವವರು ಇದ್ದಾರೆ. ಇದು ಯಾರಿಗೂ ಒಳಿತಲ್ಲ ಎಂಬುದನ್ನು ಇಂದಿನ ಯುವ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕೆ.ಜಿ.ಬೋಪಯ್ಯ ಅವರು ಕಿವಿಮಾತು ಹೇಳಿದರು.’
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ್ದಾರೆ. 18 ವರ್ಷ ಪೂರ್ಣಗೊಂಡ ಭಾರತೀಯ ಎಲ್ಲಾ ಪ್ರಜೆಗಳಿಗೂ ಮತದಾನ ಹಕ್ಕು ನೀಡುವ ಮೂಲಕ ಸಮಾನ ಅವಕಾಶ ಕಲ್ಪಿಸಿದ್ದಾರೆ ಎಂದರು.
ಭಾರತ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗ, ಈ ನಾಲ್ಕು ಆಧಾರ ಸ್ಥಂಭಗಳು ರಾಷ್ಟ್ರದ ಅಭಿವೃದ್ಧಿಗೆ ಒಂದಕೊಂದು ಸಂಬಂಧ ಹೊಂದಿವೆ ಎಂದು ಅಪ್ಪಚ್ಚು ರಂಜನ್ ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು, ಬರಹಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಆಶಯವನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.
ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಚ್.ಆರ್.ಅರ್ಜುನ್ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾವ್ಯ, ಕಥೆ, ಕವಿತೆಯಲ್ಲ, ಹಾಗೆಯೇ ಕಾಲ್ಪನಿಕ ದೃಷ್ಟಿಕೋನದಿಂದ ನೋಡುವುದಲ್ಲ, ಅವರೊಬ್ಬ ಜ್ಞಾನಿ, ವಾಸ್ತವದ ಪ್ರತಿನಿಧಿ ಹಾಗೂ ಆಧುನಿಕ ಭಾರತದ ಪಿತಾಮಹ ಎಂದು ಪ್ರತಿಪಾದಿಸಿದರು.
ಡಾ.ಬಿ,ಆರ್.ಅಂಬೇಡ್ಕರ್ ಅವರು ವಿಶ್ವ ರತ್ನ, ವಿಶ್ವಜ್ಞಾನಿ, ಸಂವಿಧಾನ ತಜ್ಞ, ಜ್ಞಾನದ ಸಂಕೇತ ಎಂಬುದನ್ನು ಮರೆಯುವಂತಿಲ್ಲ. ಆ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಅರ್ಜುನ್ ಅವರು ಹೇಳಿದರು.
ಭಾರತದಲ್ಲಿನ ಜಲ, ನೆಲ, ಸಂಸ್ಕøತಿ, ಔಧ್ಯಮಿಕ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರ ಇದೆ ಎಂಬುದಕ್ಕೆ ಅಂಬೇಡ್ಕರ್ ಅವರು ಬರೆದಿರುವ ಬರಹಗಳು ಮತ್ತು ಭಾಷಣಗಳಲ್ಲಿ ತಿಳಿದುಕೊಳ್ಳಬಹುದು ಮತ್ತು ಪರಿಹಾರ ಕಾಣಬಹುದು ಎಂದರು.
‘ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾಗಿದ್ದು, ‘ದಿ ಪ್ರಾಬ್ಲಮ್ ಆಫ್ ದಿ ರೂಪಿ’ ಪುಸ್ತಕದಲ್ಲಿ ರಾಷ್ಟ್ರದ ಬ್ಯಾಂಕು ಮತ್ತು ಕರೆನ್ಸಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ ಭಾರತೀಯ ನೋಟುಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಣ ಮಾಡಬೇಕು ಎಂದು ಎಚ್.ಆರ್.ಅರ್ಜುನ್ ಅವರು ಪ್ರತಿಪಾದಿಸಿದರು.’
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ವಸ್ತುನಿಷ್ಠವಾಗಿದ್ದು, ವ್ಯಕ್ತಿ ನಿಷ್ಠೆ ಆಗಿರಲಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಮೂಕ ನಾಯಕ, ಬಹಿಷ್ಕøತ ಭಾರತ, ಜನತಾ ಹೀಗೆ ಹಲವು ಪತ್ರಿಕೆಗಳನ್ನು ಹೊರತಂದಿದ್ದರು ಎಂದು ಸೆಂಟ್ ಆನ್ಸ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಚ್.ಆರ್.ಅರ್ಜುನ್ ತಿಳಿಸಿದರು.
ವಿದ್ಯಾರ್ಥಿನಿ ಶ್ರೀಶಾ ಮಾತಾನಾಡಿ ಸಂವಿಧಾನ ಶಿಲ್ಪಿ ಡಾ.ಬಿ,ಆರ್.ಅಂಬೇಡ್ಕರ್ ಅವರನ್ನು ಪ್ರೀತಿಸುವುದಕ್ಕೆ ಮತ್ತು ಗೌರವಿಸುವುದಕ್ಕೆ ಒಂದಲ್ಲ ಒಂದು ಕಾರಣಗಳಿವೆ. ಈ ದೇಶದ ಕಾನೂನು ಸಚಿವರಾಗಿ, ಸಂವಿಧಾನ ಶಿಲ್ಪಿಯಾಗಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಸ್ವಾತಂತ್ರ್ಯ ಪೂರ್ವದಲ್ಲಿ ಅತಿ ಹೆಚ್ಚಿನ ಶಿಕ್ಷಣ ಪಡೆದವರು ಅಂಬೇಡ್ಕರ್ ಆಗಿದ್ದಾರೆ. ಅಮೇರಿಕಾದಲ್ಲಿ ಪಿಹೆಚ್‍ಡಿ ಪದವಿ ಪಡೆದ ಮೊದಲ ಭಾರತೀಯ ಕೂಡ ಅಂಬೇಡ್ಕರ್ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಂತರ್‍ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಶ್ರುಶ್ರೂಷಕರು ಹಾಗೂ ಪೌರಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಹಾಗೆಯೇ ಆದಿಜಾಂಭವ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ವತಿಯಿಂದ ಆಯ್ಕೆ ಆಗಿದ್ದ ಫಲಾನುಭವಿಗಳಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ವೀಣಾ ಅಚ್ಚಯ್ಯ ಅವರು ಪ್ರವಾಸಿ ಟ್ಯಾಕ್ಸಿಯನ್ನು ಇದೇ ಸಂದರ್ಭದಲ್ಲಿ ನೀಡಿದರು.
ನಗರಸಭಾ ಅಧ್ಯಕ್ಯರಾದ ಅನಿತಾ ಪೂವಯ್ಯ, ಉಪಧ್ಯಾಕ್ಷರಾದ ಸವಿತಾ ರಾಕೇಶ್, ಜಿಲ್ಲಾಧಿಕಾರಿ ಡಾ.ಬಿ,ಸಿ ಸತೀಶ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ. ಜಿ.ಪಂ.ಸಿಇಒ ಭಂವರ್‍ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಡೇಗೌಡ, ಉಪ ವಿಭಾಗಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಪೌರಾಯುಕ್ತರಾದ ರಾಮದಾಸ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ನಾನಾ ಇಲಾಖೆ ಅಧಿಕಾರಿಗಳು ಇದ್ದರು.
ಗರಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಸ್ವಾಗತಿಸಿದರು, ಕಾವ್ಯ ಪ್ರಾರ್ಥಿಸಿದರು, ಉಪನ್ಯಾಸಕರಾದ ಸತೀಶ್ ವಂದಿಸಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಒಳಗೊಂಡ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹಾಗೂ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಚಾಲನೆ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: