
ಕರ್ನಾಟಕಪ್ರಮುಖ ಸುದ್ದಿಮೈಸೂರು
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಕಾರಣ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಮೈಸೂರು,ಏ.21:- ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಕಾರಣ, ಇನ್ನೇನು ನಾನು ಕಾರಣನಾ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಕಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯನವರು ಮಾತೆತ್ತಿದರೆ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾರೆ. ನಾನು ಜಾತಿ ಬಳಸಿ ಅಧಿಕಾರ ಮಾಡಲಿಲ್ಲ. ಸುಳ್ಳಿನ ರಾಮಯ್ಯನವರು ಇಲ್ಲಿ ಬಂದು ಭ್ರಷ್ಟಾಚಾರ, ಕೋಟ್ಯಾಂತರ ರೂಪಾಯಿ ಲೂಟಿ ಭಾಷಣ ಮಾಡುತ್ತಾರೆ. ಯಾರಪ್ಪ ತಂದವರು ಇದನ್ನು. ನಾನು ತಂದಿದ್ದೇನಾ? ಬಿಡಿಎಂ ಮೀಟಿಂಗ್ ನಲ್ಲಿ ನಿಮ್ಮ ಶಾಸಕರಿಗೆ ಸಂದಾಯ ಮಾಡಿ ಅಂತ ಹೇಳಬೇಕಾಗಿತ್ತಾ ನಾನು? ನನ್ನ ಕಾಲದಲ್ಲಿ ಯಾವ ಅಧಿಕಾರಿಗೂ ಮಾರಾಟಕ್ಕಿಟ್ಟಿರಲಿಲ್ಲ. ಪೋಸ್ಟಿಂಗ್ ಗಳಿಗೆ ಜಾತಿ ವ್ಯಾಮೋಹದಲ್ಲೋ, ಇಲ್ಲ ಹಣ ತೆಗೆದುಕೊಂಡು ಪೋಸ್ಟಿಂಗ್ ಕೊಟ್ಟಿಲ್ಲ ನಾನು. ಆ ರೀತಿ ಆಡಳಿತ ನಡೆಸಿಲ್ಲ. ಇದಕ್ಕೆ ನನ್ನ ಅರೆಸ್ಟ್ ಮಾಡಿಸುತ್ತೀರಾ? ಈಶ್ವರಪ್ಪ ಬೇಡ ಕುಮಾರಸ್ವಾಮಿ ಅರೆಸ್ಟ್ ಮಾಡಿ ಅಂತ ಹೇಳಕಾಗತ್ತಾ ಅಂತ ಕೇಳ್ತಾ ಇದ್ದೀರಲ್ಲ, ಭ್ರಷ್ಟಾಚಾರ ನಿಲ್ಲಿಸುತ್ತೇವೆ. ಯಾವ ಭ್ರಷ್ಟಾಚಾರ ನಿಲ್ಲಿಸುತ್ತೀರಿ, ಅರ್ಕಾವತಿ ಡೀಲ್ ಏನಾಯಿತು, 2008ರಲ್ಲಿ ಸಿಎಂ ಸುಳ್ಳಿನ ರಾಮಯ್ಯ ಒಟ್ಟಿಗೆ ಮಾತನಾಡಿಕೊಂಡು ಬಂದರು.ಒಂದೇ ಹೆಲಿಕಾಪ್ಟರ್ ನಲ್ಲಿ ಬಂದಾಗ ಏನು ಮಾತನಾಡಿದರು. ಆಗ ನೀವು ಬಿಜೆಪಿ ಬಿ ಟೀಂ ಆಗಿರಲಿಲ್ಲವಾ ಎಂದು ವಾಗ್ದಾಳಿ ನಡೆಸಿದರು. ಅಸೆಂಬ್ಲಿಯಲ್ಲಿ ಚರ್ಚೆ ಮಾಡಲು ಬಿಟ್ಟಿಲ್ಲ. ಏನಾಯಿತು ಕೆಂಪಣ್ಣ ಆಯೋಗ? ನೀವಿದ್ದಿರಲ್ಲ ಹದಿನಾಲ್ಕು ತಿಂಗಳು ಮಾಡಬೇಕಿತ್ತು ಅಂತೀರಲ್ಲ, ನನಗೆ ಮಾಡಲು ಬಿಟ್ಟರೆ ತಾನೇ? ನನ್ನನ್ನು ಕಟ್ಟಿಹಾಕಿದ್ರಲ್ಲ. ಅದಕ್ಕೆ ನಾನು ರಾಜ್ಯದ ಜನತೆಗೆ ಸ್ವತಂತ್ರವಾದ ಐದು ವರ್ಷದ ಸರ್ಕಾರ ಕೊಡಿ. ಸಂಪತ್ತನ್ನು ಯಾವ ರೀತಿ ಉಳಿಸಬೇಕು. ಧೃವನಾರಾಯಣ್ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅಧಿಕಾರ ಕೊಡಿ ಅಂತಾರೆ ಕೊಟ್ಟಿದ್ರಲ್ಲಪ್ಪ ಐದು ವರುಷ.
ಆಗ ಯಾಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.
ನನಗೆ ಬಿಜೆಪಿನೂ ಅಲ್ಲ, ಕಾಂಗ್ರೆಸ್ಸೂ ಅಲ್ಲ, ಎರಡೂ ಪಕ್ಷಗಳನ್ನು ಜನರು ತಿರಸ್ಕಾರ ಮಾಡಿ. ನನಗೆ ಚುನಾವಣೆ ಮುಖ್ಯವಲ್ಲ. ಜನರ ಹಿತ ಮುಖ್ಯವೆಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿ ಗಲಭೆ ಕುರಿತು ಪ್ರತಿಕ್ರಿಯಿಸಿ ಗಲಭೆ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿ. ಗಲಭೆಕೋರರ ಮನೆಗೆ ಬುಲ್ಡೋಜರ್ ಹತ್ತಿಸಿದರೆ ಲಾಭವಿಲ್ಲ. ಸಂಪತ್ತು ಲೂಟಿ, ಬೆಂಕಿ ಹಚ್ಚುವವರ ವಿರುದ್ಧ ಕಾರ್ಯಾಚರಣೆ ಮಾಡಿ ಎಂದು ಸಲಹೆ ನೀಡಿದರು.
ಕುಮಾರಸ್ವಾಮಿ ನಾಲಿಗೆಯಲ್ಲಿ ಮೂಳೆ ಇಲ್ಲ ಎಂದು ಯಾರೋ ಹೇಳುತ್ತಿದ್ದರು. ಬಿಜೆಪಿ ವಿರುದ್ಧ ಕುಮಾರಸ್ವಾಮಿಯವರದ್ದು ಮೃದು ಧೋರಣೆ ಎಂದಿದ್ದಾರೆ. ಹಾಗೆ ಹೇಳಿದವರಿಗೆ ನಿಮ್ಮ ನಾಲಿಗೆಯಲ್ಲಿ ಮೂಳೆ ಇದೆಯಾ? ಹತ್ತು ನಿಮಿಷದಲ್ಲಿ ಸತ್ಯವನ್ನು ಜನರ ಮುಂದೆ ಇಡಬಹುದು. ಬಿಜೆಪಿ ಸರ್ಕಾರಕ್ಕೆ ನಾನು ಸರ್ಟಿಫಿಕೇಟ್ ಕೊಟ್ಟಿದ್ದೇನಾ? ನಾನು ದಾಖಲೆ ಇಟ್ಟುಕೊಂಡು ಮಾತನಾಡುವವನು. ನನ್ನ ಹೋರಾಟದಿಂದ ಯಡಿಯೂರಪ್ಪ ಬಿಜೆಪಿ ಬಿಟ್ಟರು. ಅವರು ಬಿಜೆಪಿ ಬಿಟ್ಟ ಲಾಭದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಸಿದ್ದರಾಮಯ್ಯ ಸಂತೆ ಭಾಷಣ ಮಾಡಿ ಮುಖ್ಯಮಂತ್ರಿಯಾದರು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಸ್ಪರ್ಧೆಯ ಮೇಲೆ ಹಣದ ನೆರವು ಮಾಡುತ್ತಿದ್ದಾರೆ. ಅವರ ಸಹಾಯಕ್ಕೆ ಅಭಿನಂದನೆ. ಈಶ್ವರಪ್ಪನವರು ಸಾವಿಗೆ ನೇರ ಕಾರಣ ಅನ್ನೋದನ್ನು ದಾಖಲೆ ಕೊಟ್ಟು ಒತ್ತಾಯಿಸಿ. ಕಲ್ಲಪ್ಪ ಹಂಡಿಭಾಗ್ ಮೃತಪಟ್ಟಾಗ ನಾನು ಆತನ ಪರ ಹೋರಾಟ ಮಾಡಿದ್ದೆ. ಆಗ ನಾನು ರಾಜಕೀಯ ಮಾಡಲಿಲ್ಲ. ಅದು ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಅಲ್ಲವಾ? ಡಿವೈಎಸ್ಪಿ ಆತ್ಮಹತ್ಯೆಗೆ ಸಿದ್ದರಾಮಯ್ಯನವರನ್ನು ಬಂಧಿಸಿ ಅಂದಿದ್ದೇವಾ? ಎಲ್ಲದರಲ್ಲೂ ರಾಜಕಾರಣ ಮಾಡಬಾರದು. ದ್ವೇಷವಿದ್ದರೆ ಅದು ಬೇರೆ. ಒಂದು ವೇಳೆ ಜೈಲಿಗೆ ಹೋಗಿ ಬಂದರೆ ನಿರಪರಾಧಿ ಅಂದರೆ ಏನು ಮಾಡ್ತೀರಿ, ದಾಖಲೆ ಇದ್ದರೆ ಜೈಲಿಗೆ ಕಳುಹಿಸಿ ಕಾಂಗ್ರೆಸ್ ನವರದ್ದು ವೈಯುಕ್ತಿಕ ಹೋರಾಟ. ಸರ್ಕಾರ ಇದನ್ನು ಹತ್ತು ನಿಮಿಷದಲ್ಲಿ ಕ್ಲಿಯರ್ ಮಾಡಬಹುದು. ಪಾರದರ್ಶಕತೆ ಇದ್ದರೆ ಎಲ್ಲವನ್ನೂ ಜನರ ಮುಂದೆ ಇಡಬಹುದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)