ಕರ್ನಾಟಕಪ್ರಮುಖ ಸುದ್ದಿ

ಪಿಎಂ ಕಿಸಾನ್ ಸಮ್ಮಾನ ನಿಧಿ; ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಿರಿ

ರಾಜ್ಯ(ಮಡಿಕೇರಿ) ಏ.26:-ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಇದು ಕೇಂದ್ರ ಸರ್ಕಾರದ ಪ್ರಯುಖ ಯೋಜನೆಯಾಗಿದ್ದು 2018 ರ ಡಿಸೆಂಬರ್ 1 ರಿಂದ ಪ್ರಾರಂಭವಾಗಿದೆ.
ದೇಶದ ಎಲ್ಲ ರೈತ ಕುಟುಂಬಗಳಿಗೆ ಆದಾಯ ಬೆಂಬಲ ನೀಡುವ ಉದ್ದೇಶದಿಂದ ಕೃಷಿ ಭೂಮಿ ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಯೋಜನೆಯೇ ಪಿಎಂ ಕಿಸಾನ್ ಸಮ್ಮಾನ ನಿಧಿ. ಈ ಯೋಜನೆಯಲ್ಲಿ ಪ್ರತಿ ವರ್ಷ ಆರು ಸಾವಿರ ರೂಪಾಯಿಯನ್ನು ಮೂರು ಸಮಾನ ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಸಿಎಸ್‍ಸಿ ಗಳಲ್ಲಿ (ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ) ರೈತರು ನೋಂದಣಿ ಮಾಡಿಕೊಳ್ಳಬಹುದು.
ಪಿಎಂ ಕಿಸಾನ್ ಡಾಟಾ ಬೇಸ್‍ನಲ್ಲಿರೋ ಮಾಹಿತಿಯನ್ನು ಆಧಾರ್ ಡಾಟಾ ಬೇಸ್ ನಲ್ಲಿರೋ ರೀತಿಯಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ಈವರೆಗೆ 12.35 ಕೋಟಿ ಕುಟುಂಬಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿ ಕಿಸಾನ್ ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‍ನ ಲಾಭ ಪಡೆದುಕೊಂಡಿಲ್ಲ.
‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದೆ ಇದ್ದವರು ಏಪ್ರಿಲ್, 30 ರೊಳಗೆ ಹತ್ತಿರದ ಬ್ಯಾಂಕನ್ನು ಸಂಪರ್ಕಿಸಿ ರೈತರು ಈ ಯೋಜನೆಯ ಲಾಭ ಪಡೆಯಬಹುದು.’
ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರುಗಳಿಗೆ ಪಿಎಂ ಕಿಸಾನ್ ಫಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆ ಮೇರೆಗೆ ಬೆಳೆಸಾಲ(ಕೆಸಿಸಿ) ವಿತರಿಸಲು ಸೂಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಈವರೆಗೆ 48,980 ಜನ ರೈತರನ್ನು ನೋಂದಾಯಿಸಲಾಗಿದೆ.
ಇದೇ ಏಪ್ರಿಲ್, 24 ’ಪಂಚಾಯತ್ ರಾಜ್ ದಿನ” ದಂದು ಪ್ರಧಾನಮಂತ್ರಿ ಅವರು ಉದ್ಘಾಟಿಸಿದ ‘ಕಿಸಾನ್ ಭಾಗೇಧಾರಿ ಪ್ರಾಥಮಿಕತಾ ಹಮಾರಿ’ ಎಂಬ ವಿನೂತನ ಕಾರ್ಯಕ್ರಮ ಚಾಲನೆಗೊಳ್ಳುತಿದ್ದು, ಪಿಎಂ ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳಾಗಿದ್ದು, ಈವರೆಗೆ ಕೃಷಿ ಸಾಲ ಪಡೆಯದವರು ಕೃಷಿ ಸಾಲವನ್ನು ಹತ್ತಿರದ ಬ್ಯಾಂಕ್‍ಗಳಲ್ಲಿ ಪಡೆದುಕೊಳ್ಳುವುದರ ಜೊತೆಗೆ ಪ್ರಧಾನಮಂತ್ರಿಗಳ ಸಾಮಾಜಿಕ ಸುರಕ್ಷಾ ಯೋಜನೆಗಳಾದ ಪಿಎಂಎಸ್‍ಬಿವೈ, ಪಿಎಂಜೆಜೆಬಿವೈ ಹಾಗೂ ಅಟಲ್ ಪಿಂಚಣಿ ಯೋಜನೆಗಳಿಗೂ ಕೂಡಾ ಹೊಸದಾಗಿ ಸೇರ್ಪಡೆಗೊಳ್ಳಬಹುದು ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೋರಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: