ಮೈಸೂರು

ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ಸುತ್ತೂರು ಮಠ

ಮೈಸೂರು, ಮೇ.1:- ರಷ್ಯಾ ಉಕ್ರೇನ್ ನಡುವೆ ಯುದ್ದ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ಉಕ್ರೇನ್ ಗೆ ತೆರಳಿದ್ದ ವಿದ್ಯಾರ್ಥಿಗಳು ಅತಂತ್ರರಾಗಿದ್ದು ಅವರ ನೆರವಿಗೆ ಮೈಸೂರಿನ ಸುತ್ತೂರು ಮಠ ಮುಂದೆ ಬಂದಿದೆ.

ವಿದ್ಯಾಭ್ಯಾಸ ಮುಂದುವರಿಸಲಾಗದೇ ಕಂಗಾಲಾಗಿದ್ದ ವಿದ್ಯಾರ್ಥಿಗಳಿಗೆ ಇದೀಗ ವಿದ್ಯಾರ್ಥಿಗಳ ನೆರವಿಗೆ ಮೈಸೂರಿನ ಸುತ್ತೂರು ಮಠ ಮುಂದಾಗಿದೆ. ಉಕ್ರೇನ್ ನಿಂದ ವಾಪಸ್ಸಾಗಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲು ಸುತ್ತೂರು ಮಠ ತೀರ್ಮಾನಿಸಿದೆ.

ಈ ಕುರಿತು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರತಿಕ್ರಿಯೆ ನೀಡಿ, ಪ್ರಕಟಣೆ ಹೊರ ಬೀಳುತ್ತಿದ್ದಂತೆ, 48 ಗಂಟೆಗಳ ಅವಧಿಯಲ್ಲಿ 511 ಮಂದಿ ವಿದ್ಯಾರ್ಥಿಗಳಿಂದ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಕೋರಿಕೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಲಭ್ಯವಾದ ಬಳಿಕ ವಿದ್ಯಾಭ್ಯಾಸ ಮುಂದುವರಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿರುವ ಸುತ್ತೂರು ಮಠ. ಅತಂತ್ರಗೊಂಡಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣ ಪತ್ರ ನೀಡುವುದಿಲ್ಲ. ಬ್ರಿಡ್ಜ್ ಕೋರ್ಸ್ ನಡೆಸಿರುವುದಾಗಿ ಪತ್ರವನ್ನು ಜೆ ಎಸ್ ಎಸ್ ಶಿಕ್ಷಣ ಸಂಸ್ಥೆ ನೀಡಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮೊಟಕು ಆಗದಿರಲೆಂದು ಪ್ರಾಯೋಗಿಕ ತರಗತಿಗಳಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ ಎಂದು ಸುತ್ತೂರು ಶ್ರೀಗಳು ತಿಳಿಸಿದ್ದಾರೆ.

ಜೆಎಸ್ಎಸ್ ತಾಂತ್ರಿಕ ಮತ್ತು ವಿಜ್ಞಾನ ಕಾಲೇಜಿನ ಕುಲಸಚಿವ ಡಾ.ಸುರೇಶ್ ಮಾತನಾಡಿ, ಕೋರ್ಸ್ ಕಟೆಂಟ್ ನೀಡಲಾಗುವುದು. ಬ್ರಿಡ್ಜ್ ಕೋರ್ಸ್ ಮಾಡಿರುವುದಕ್ಕೆ ಸರ್ಟಿಫಿಕೇಟ್ ಕೊಡುತ್ತೇವೆ. ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಾಗುವುದು. ಪ್ರತ್ಯೇಕವಾಗಿ ಇವರಿಗೆ ಕ್ಲಾಸ್ ಮಾಡಲಾಗುವುದು. ಇದು ನಮಗೆ ದೊಡ್ಡ ಚಾಲೆಂಜ್, ಕಷ್ಟ ಕೂಡ ಆಗುತ್ತದೆ. ಆದರೂ ಕೂಡ ರಿಸ್ಕ್ ತೆಗೆದುಕೊಂಡು ಈ ಸೌಲಭ್ಯ ಕಲ್ಪಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: