ಮೈಸೂರು

ಪಿಎಸ್ ಐ ಪರೀಕ್ಷೆ ಅಕ್ರಮ ಪ್ರಕರಣ; ಸರ್ಕಾರ ತನಿಖೆ ನಡೆಸುತ್ತಿರುವ ರೀತಿಯೇ ಸರಿಯಿಲ್ಲ : ಪ್ರಿಯಾಂಕ್ ಖರ್ಗೆ ಕಿಡಿ

ಮೈಸೂರು,ಮೇ.2:- ಪಿಎಸ್ ಐ ಪರೀಕ್ಷೆ ಅಕ್ರಮ ಪ್ರಕರಣ ಕುರಿತು ಸರ್ಕಾರ ತನಿಖೆ ನಡೆಸುತ್ತಿರುವ ರೀತಿಯೇ ಸರಿ ಇಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಮೈಸೂರಿನಲ್ಲಿಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಗೃಹಸಚಿವರು ಕಲಾಪದಲ್ಲಿ ಸುಗಮವಾಗಿ ಆಗಿದೆ. ಅಕ್ರಮ ನಡೆದಿಲ್ಲ ಎಂದಿದ್ದರು. ಸರ್ಕಾರದಲ್ಲಿ ಇಲಾಖೆಗೆ ಹಿಡಿತ ಇಲ್ಲ, ಪಿಎಸ್ ಐ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಸರ್ಕಾರ ಕಲಬುರಗಿಗೆ ಮಾತ್ರ ಇನ್ವೆಸ್ಟಿಗೇಷನ್ ಸೀಮಿತಗೊಳಿಸಿದೆ. 19ಮಂದಿ ಮಾತ್ರ ಬಂಧಿಸಲಾಗಿದೆ. 57ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. ಎಲ್ಲರೂ ಅನುಮಾನಪಡುತ್ತಿರುವುದು ಸುಮಾರು 300ಮಂದಿ ಇದರಲ್ಲಿ ಅಕ್ರಮವಾಗಿ ಬಂದಿದ್ದಾರೆ. ಈಗ ಅರೆಸ್ಟ್ ಆಗಿರುವುದು ಎಷ್ಟು ಜನ? 7ಜನ ಕಲಬುರಗಿನಲ್ಲಿ, 12ಜನ ಬೆಂಗಳೂರಿನಲ್ಲಿ. 19ಮಂದಿ ಮಾತ್ರ ಅರೆಸ್ಟ್ ಆಗಿರುವುದು, ಮಿಕ್ಕವರೆಲ್ಲಿದ್ದಾರೆ ? ತನಿಖೆ ಮಾಡುತ್ತಿರುವುದು ಒಂದು ಪರೀಕ್ಷಾ ಕೇಂದ್ರವಷ್ಟೇ, ಹಲವಾರು ಪರೀಕ್ಷಾ ಕೇಂದ್ರಗಳಿವೆ. ಬೆಳಗಾವಿಯಲ್ಲಿ ಅಕ್ರಮ ನಡೆದಿದೆ ಎನ್ನುತ್ತಿದ್ದಾರೆ. ಬೆಂಗಳೂರು ಸೆಂಟರ್ ನಲ್ಲಿ ವಿಡಿಯೋಗಳೇ ಇಲ್ಲ ಎನ್ನುತ್ತಿದ್ದಾರೆ. ಇವೆಲ್ಲ ತನಿಖೆಯಾಗುವುದು ಯಾವಾಗ? ನೀವು ಅಲ್ಲಿಗೆ ಸೀಮಿತ ಇಟ್ಟರೆ ಹೇಗೆ? ಇಷ್ಟಕ್ಕೆ ಮುಗಿಸಬೇಕು ಅಂತ ಸರ್ಕಾರ ಹೊರಟಿದೆ. ಮರುಪರೀಕ್ಷೆ ಮಾಡಬೇಕು ಅಂತ ಸರ್ಕಾರ ಆತುರದಿಂದ ನೋಟಿಫಿಕೇಷನ್ ಕಳಿಸಿದ್ರಲ್ಲ, ಕಲಬುರಗಿಗೆ ಮುಗಿಸಬೇಕು ಇದನ್ನು, ಬೆಂಗಳೂರು ತನಕ ಬರೋದು ಬೇಡ ಅನ್ನೋ ಅನುಮಾನ ನನಗೆ ಬರುತ್ತಿದೆ. ಇವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದರು, ಇವರ ಪಾಲು ಎಷ್ಟಿತ್ತು. ಎಲ್ಲವೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗಲಿದ್ದಾರೆ ಎಂದು ಹೊಸಬಾಂಬ್ ಸಿಡಿಸಿದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಚಾರ್ಜ್ ಆದ ಮೇಲೆ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ. ಅಂದು ಮತ್ತು ಇಂದು ಅದನ್ನೇ ಹೇಳುತ್ತಿದ್ದೇನೆ. ಬಿಟ್ ಕಾಯಿನ್ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ 3 ನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾದ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: