
ಕರ್ನಾಟಕಪ್ರಮುಖ ಸುದ್ದಿಮೈಸೂರು
ನನ್ನನ್ನ ಸೈಡ್ಲೈನ್ ಮಾಡಬಲ್ಲವರು ಯಾರೂ ಇಲ್ಲ! : ಸಿಟಿಟುಡೆ ಜೊತೆ ಜಾರಕಿಹೊಳಿ ಚಿಟ್`ಚಾಟ್
ರಾಜ್ಯ (ಪ್ರಮುಖ ಸುದ್ದಿ) ಮೈಸೂರು, ಮೇ 12 :- ಕಾಂಗ್ರೆಸ್ ಭಿನ್ನಮತೀಯ ನಾಯಕ ಎಚ್.ವಿಶ್ವನಾಥ್ ಅವರನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೈಸೂರಿನಲ್ಲಿ ಭೇಟಿ ಮಾಡಿದ್ದಾರೆ.
ಕಾಂಗ್ರೆಸ್ ತೊರೆಯಲು ಸಜ್ಜಾಗಿರುವ ವಿಶ್ವನಾಥ್ ಅವರ ಜೊತೆಗಿನ ಭೇಟಿ ರಾಜ್ಯದಲ್ಲಿ ಕುತೂಹಲ ಕೆರಳಿಸಿದೆ.
ಮೈಸೂರು ವಿವಿ ಅತಿಥಿ ಗೃಹದಲ್ಲಿ ‘ಸಿಟಿಟುಡೆ’ ಪ್ರತಿನಿಧಿ ಸುರೇಶ್ ಅವರ ಜೊತೆ ಸತೀಶ್ ಜಾರಕಿಹೊಳಿ ಅವರು ಎಕ್ಸ್`ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಅವರ ಜತೆಗಿನ ಚಿಟ್`ಚಾಟ್ ನಿಮಗಾಗಿ :
ಮಾಜಿ ಸಂಸದರನ್ನ ದಿಡೀರ್ ಭೇಟಿಯಾದ ಉದ್ದೇಶ?
ಇದೊಂದು ಸೌಹಾರ್ದಯುತವಾದ ಭೇಟಿಯಾಗಿದೆ. ಹಿರಿಯ ನಾಯಕರನ್ನು ಭೇಟಿ ಮಾಡಬೇಕೆಂದು ತುಂಬಾ ದಿನದಿಂದ ಅಂದುಕೊಂಡಿದ್ದೆ. ಇವತ್ತು ಭೇಟಿ ಮಾಡಿದ್ದೇನೆ.
ಸತೀಶ್ ಜಾರಕಿ ಹೊಳಿ ಜೆಡಿಎಸ್ ಸೇರುತ್ತಾರೆಂಬ ಮಾತಿದೆ..?
ನಾನು ಕಾಂಗ್ರೆಸ್ ನಾಯಕ. ಜೆಡಿಎಸ್ ಸೇರುವ ವಿಚಾರ ಇಲ್ಲ. ಉಪಚುನಾವಣೆಯಲ್ಲಿ ನಾನು ಮತ್ತು ನಮ್ಮ ಪಕ್ಷದ ಒಗ್ಗಟ್ಟಿನಿಂದ ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ. ಸದ್ಯ ನಾವು ಮುಂದಿನ ಚುನಾವಣೆಯ ತಯಾರಿಯಲ್ಲಿದ್ದೇವೆ ಎಂದರು.
ನಿಮ್ಮ ಕ್ಷೇತ್ರದ ಮಹಿಳೆಯೊಬ್ಬರು ನಿಮನ್ನು ಸೈಡ್`ಲೈನ್ ಮಾಡುತ್ತಿದ್ದಾರಾ?
ನನಗೆ ಸೈಡ್ ಲೈನ್ ಯಾರು ಮಾಡ್ತಾರೆ? ನನಗೆ ಸೈಡ್`ಲೈನ್ ಮಾಡಬಲ್ಲವರು ಯಾರೂ ಇಲ್ಲ. ನಾನು ಏನೂ ಎಂಬುದು ನಮ್ಮ ಪಕ್ಷಕ್ಕೆ ಹಾಗೂ ನಮ್ಮ ಹಿರಿಯ ನಾಯಕರಿಗೆ ಗೊತ್ತಿದೆ. ಹಾಗಾಗಿ ನಾನು ಸೈಡ್ ಲೈನ್ ಆಗುವ ಪ್ರಶ್ನೆಯೇ ಇಲ್ಲ.
ವಿಶ್ವನಾಥ್ ಅವರ ಜೊತೆ ನಡೆದ 20 ನಿಮಿಷಗಳ ಮಾತುಕತೆ ಏನು?
ಇದು ಕೇವಲ ಸೌಹಾರ್ದ ಮಾತುಕತೆ. ಮೊದಲೇ ಹೇಳಿದಂತೆ ನಾನು ಹಿರಿಯರನ್ನ ಮಾತನಾಡಿಸುವ ಸಲುವಾಗಿ ಹಾಗೂ ಮೈಸೂರಿನಲ್ಲಿ ಕಾರ್ಯಕ್ರಮದ ನಿಮಿತ್ತ ಬಂದೆ. ಇದೀಗ ಮತ್ತೆ ಊರಿಗೆ ತೆರಳುತ್ತೇನೆ.
ವಿಶ್ವನಾಥ್ ಅವರು ಕಾಂಗ್ರೆಸ್ ಬಿಡ್ತಾರಂತೆ ನಿಜವೇ ?
ಖಂಡಿತ ಇಲ್ಲ. ಯಾವುದೇ ರಾಜಕೀಯ ಮಾತುಕತೆ ಇಂದು ನಡೆದಿಲ್ಲ. ಅವರ ಆರೋಗ್ಯ ಹಾಗೂ ಯೋಗಕ್ಷೇಮದ ಬಗ್ಗೆ ಮಾತುಕತೆ ನಡೆಸಿದ್ದೇನೆ ಅಷ್ಟೇ. ಅದನ್ನ ಬಿಟ್ಟು ಬೇರೆ ಯಾವ ಮಾತುಕತೆಯೂ ಇಲ್ಲ.
ನಿಮ್ಮನ್ನ ಪಕ್ಷ ಕಡೆಗಣಿಸಿದ್ಯಾ..?
ಖಂಡಿತ ಇಲ್ಲ. ಹಾಗಿದ್ದರೆ ನನಗೆ ಸಚಿವ ಸ್ಥಾನ ಸಿಗುತ್ತಲೇ ಇರಲಿಲ್ಲ. ನನಗೆ ಸಚಿವ ಸ್ಥಾನ ಸಿಕ್ಕಿದೆ. ಒಳ್ಳೆಯ ಕೆಲಸ ಮಾಡಿದ್ದೇನೆಂಬ ತೃಪ್ತಿ ಇದೆ. ಮುಂದೆಯೂ ಪಕ್ಷ ಸಂಘಟನೆ ಹಾಗೂ ಪಕ್ಷಕ್ಕಾಗಿ ದುಡಿಯುತ್ತೇನೆ.
-ಎಸ್.ಎನ್/ಎನ್.ಬಿ.ಎನ್.