ಮೈಸೂರು

ಬೆಳ್ಳಿ ಆಸೆಗಾಗಿ ಕೆಲಸ ಕೊಟ್ಟಾತನನ್ನೇ ಕೊಂದ ಕಿರಾತಕನ ಬಂಧನ

ಮೈಸೂರು, ಮೇ.9:- ಬೆಳ್ಳಿ ಆಸೆಗಾಗಿ ಕೆಲಸ ಕೊಟ್ಟಾತನನ್ನೇ ಕೊಂದು ಎಸ್ಕೇಪ್ ಆಗಿದ್ದ ಹಂತಕನನ್ನು ಲಷ್ಕರ್ ಠಾಣಾ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ಷಾಂತರ ಮೌಲ್ಯದ ಬೆಳ್ಳಿ ಗಟ್ಟಿಗಳ ಸಮೇತ ರಾಜಸ್ಥಾನ್ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಇನ್ಸ್ಪೆಕ್ಟರ್ ಸಂತೋಷ್ ಅಂಡ್ ಟೀಂ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ 8 ಲಕ್ಷ ಮೌಲ್ಯದ 12 ಕೆ.ಜಿ.ಬೆಳ್ಳಿಯನ್ನ ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಅರ್ಜುನ್ ಕುಮಾರ್ (28) ಎಂದು ಹೇಳಲಾಗಿದೆ. ಗೋವಿಂದ(30) ಕೊಲೆಯಾದ ದುರ್ದೈವಿ. ಕೊಲೆಯಾದ ಗೋವಿಂದ ಹಾಗೂ ಆರೋಪಿ ಅರ್ಜುನ್ ಕುಮಾರ್ ಇಬ್ಬರೂ ರಾಜಾಸ್ಥಾನದವರು. ಮೈಸೂರಿನ ಸುಮತಿನಾಥ ಜೈನಮಂದಿರಕ್ಕೆ ಸಂಬಂಧಪಟ್ಟಂತೆ ಬೆಳ್ಳಿ ಕೆಲಸ ಮಾಡಲು ಗೋವಿಂದ ಮೈಸೂರಿಗೆ ಬಂದಿದ್ದರು. ಗೋವಿಂದ ತಮ್ಮ ಸಹಾಯಕ್ಕಾಗಿ ರಾಜಾಸ್ಥಾನದ ಪೊಮಾವ್ ಗ್ರಾಮದ ಅರ್ಜುನ್ ಕುಮಾರ್ ನನ್ನೂ ಕರೆತಂದಿದ್ದರು. ದೇವಸ್ಥಾನದ ಕೆಲಸಕ್ಕಾಗಿ ಮುಖ್ಯಸ್ಥರಾದ ಬೇರುಮಲ್ ಜೈನ್14 ಕೆ.ಜಿ.ಬೆಳ್ಳಿ ಕೊಟ್ಟಿದ್ದರು.  ಹಳ್ಳದಕೇರಿಯ ಬಳಿ ಉಳಿದುಕೊಂಡಿದ್ದ ಇಬ್ಬರೂ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು. ಏಪ್ರಿಲ್ 27 ರ ಬೆಳಿಗ್ಗೆ ಗೋವಿಂದ ಮೃತಪಟ್ಟಿದ್ದಾರೆ. ರಕ್ತದ ಮಡುವಿನಲ್ಲಿ ಗೋವಿಂದ ಅವರ ಶವ ಪತ್ತೆಯಾಗಿದೆ. ಗೋವಿಂದ ಅವರ ತಲೆಯ ಮೇಲೆ ಫ್ಯಾನ್ ಬಿದ್ದಿರುವಂತೆ ಸನ್ನಿವೇಶ ಸೃಷ್ಟಿಸಲಾಗಿರುತ್ತದೆ. ಫ್ಯಾನ್ ತಲೆ ಮೇಲೆ ಬಿದ್ದು ಸಾವನ್ನಪ್ಪಿರುವಂತೆ ಸೃಷ್ಟಿಸಲಾಗಿರುತ್ತದೆ. ಕೊಲೆ ಪ್ರಕರಣವನ್ನು ಲಷ್ಕರ್ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ದಾಖಲಿಸಿಕೊಂಡಿದ್ದಾರೆ. ಗೋವಿಂದ್ ಜೊತೆ ಕೆಲಸ ಮಾಡುತ್ತಿದ್ದ ಅರ್ಜುನ್ ಕುಮಾರ್ ನಾಪತ್ತೆಯಾಗಿದ್ದಾನೆ. ಆರೋಪಿ ಅರ್ಜುನ್ ಕುಮಾರ್ ಸೆರೆಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಪ್ರದೀಪ್ ಗುಂಟೆ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಎಂ.ಎನ್.ಶಶಿಧರ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಗಳಾದ ಗೌತಮ್,ಧನಲಕ್ಷ್ಮಿ,ಪ್ರೊಬೇಷನರಿ ಎಸ್ಸೈ ಕೀರ್ತಿ,ಎಎಸ್ಸೈ ಸಿದ್ದರಾಜು,ಸಿಬ್ಬಂದಿಗಳಾದ ಮಲ್ಲಿಕಾರ್ಜುನ,ಲಿಂಗರಾಜು,ಅನಿಲ್ ಪತ್ತಾರ್,ಹೇಮಂತ್,ಮಹೇಶ್,ಸತ್ಯ,ಚಿನ್ನಪ್ಪ,ಮಂಜು,ಲೋಕೇಶ್ ಒಳಗೊಂಡ ತಂಡ ಕಾರ್ಯಾಚರಣೆ ಗಿಳಿದಿತ್ತು.

ಆರೋಪಿಯ ಜಾಡು ಹಿಡಿದ ಪೊಲೀಸರಿಗೆ ರಾಜಸ್ಥಾನ್ ನಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಇಡೀ ತಂಡ ರಾಜಸ್ಥಾನ್ ಗೆ ತೆರಳಿ ಅರ್ಜುನ್ ಕುಮಾರ್ ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆರೋಪಿಯಿಂದ 8 ಲಕ್ಷ ಮೌಲ್ಯದ 12 ಕೆ.ಜಿ.ಬೆಳ್ಳಿ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲಷ್ಕರ್ ಪೊಲೀಸ್ ಠಾಣೆಯ ಇತಿಹಾಸದಲ್ಲಿ ಹೊರರಾಜ್ಯದಿಂದ ಆರೋಪಿಯನ್ನು ಬಂಧಿಸಿರುವ ಮೊದಲ ದಾಖಲೆ ಇದಾಗಿದೆ. ಬೆಳ್ಳಿಯ ಆಸೆಗಾಗಿ ಅನ್ನ ಕೊಟ್ಟವನನ್ನೇ ಕೊಂದು ಆಕಸ್ಮಿಕ ಸಾವು ಎಂಬಂತೆ ಸೃಷ್ಟಿಸಿ ನಾಪತ್ತೆಯಾಗಿದ್ದ ಹಂತಕನ ಹೆಡೆಮುರಿ  ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: