
ಮೈಸೂರು
ಗ್ರಾಮಸ್ಥರಿಂದ ಬಹಿಷ್ಕಾರ ಮತ್ತು ದಂಡ : ನ್ಯಾಯಕ್ಕಾಗಿ ಒತ್ತಾಯ
ಮೈಸೂರು. ಮೇ.13 : ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದ ನಿವಾಸಿಗಳಾದ ದೊಡ್ಡಯ್ಯ ಮತ್ತು ಪಾರ್ವತಮ್ಮ ಕುಟುಂಬಕ್ಕೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಗೂ ದಂಡ ವಿಧಿಸಿದ್ದಾರೆ ಎಂದು ಸಂತ್ರಸ್ಥೆ ನೀಲಮ್ಮ ಆಳಲು ತೋಡಿಕೊಂಡರು.
ಶನಿವಾರ, ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಮ್ಮರಗಳ್ಳಿ ಗ್ರಾಮದ ಮರಿಚಿಕ್ಕಯ್ಯ, ಪುಟ್ಟಯ್ಯ, ಮಹದೇವಯ್ಯ, ಚಿಕ್ಕದೇವಯ್ಯ ಹಾಗೂ ಇತರರು ಪಂಚಾಯ್ತಿ ಸೇರಿ ನಮ್ಮ ಕುಟುಂಬದ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸುವ ಮೂಲಕ ಗ್ರಾಮದಿಂದ ಬಹಿಷ್ಕಾರ ಹಾಕಿದರು. ಅಷ್ಟೇ ಅಲ್ಲದೇ ಸುಮಾರು 3.50 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. ಇಂದಿಗೂ ಗ್ರಾಮಸ್ಥರೊಂದಿಗೆ ಸೌಹಾರ್ದಯುತ ಜೀವನ ನಡೆಸಲು ಸಾಧ್ಯವಾಗಿಲ್ಲ, ಈ ಕುರಿತು ಕಳೆದ ಜ.27ರಂದು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮವನ್ನೂ ಜರುಗಿಸಿಲ್ಲ. ಕೇವಲ ಗ್ರಾಮದ ಮುಖಂಡರಿಗೆ ಎಚ್ಚರಿಕೆಯನ್ನು ನೀಡಿ ತಟಸ್ಥರಾಗಿದ್ದಾರೆ ಎಂದು ದೂರಿದರು. ಬಹಿಷ್ಕಾರದ ನೋವಿನಲ್ಲಿಯೇ ನನ್ನ ತಾಯಿ ಹಾಸಿಗೆ ಹಿಡಿದು ಸಾವನಪ್ಪಿದರು. ಶವ ಸಂಸ್ಕಾರ ಸಮಯದಲ್ಲಿಯೂ ಗ್ರಾಮಸ್ಥರು ಅಸಹಕಾರ ತೋರಿದ್ದರು ಎಂದು ದುಃಖಿಸಿದರು. ಬಹಿಷ್ಕಾರದಿಂದಾಗಿ ಗ್ರಾಮದಲ್ಲಿ ಬದುಕಲು ಹಿಂಸೆಯಾಗುತ್ತಿದ್ದು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಸಂಬಂಧಿಸಿದ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.
ಬಹಿಷ್ಕಾರಕ್ಕೊಳಗಾದ ಕುಟುಂಬಸ್ಥರಾದ ಪುಟ್ಟಮ್ಮ, ದೊಡ್ಡಯ್ಯ ಹಾಗೂ ಗೋಪಾಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಬಹಿಷ್ಕಾರ ಪದ್ಧತಿ ಇನ್ನೂ ಜೀವಂತವಾಗಿದ್ದರೂ ಇತ್ತ ಯಾರೂ ಗಮನ ಹರಿಸುತ್ತಿಲ್ಲ. ಕಳೆದೊಂದು ತಿಂಗಳಿನಲ್ಲಿ ಎರಡನೇಯ ಬಹಿಷ್ಕಾರದ ಪ್ರಕರಣವು ಜಿಲ್ಲೆಯಲ್ಲಿ ವರದಿಯಾಗಿದೆ. (ವರದಿ : ಕೆ.ಎಂ.ಆರ್, ಎಸ್.ಎಚ್)