ಮೈಸೂರು

ಹತ್ತನೇ ತರಗತಿ ಪಠ್ಯದಲ್ಲಿ ಭಗತ್ ಸಿಂಗ್ ಪಾಠ ಕೈಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು,ಮೇ.17:- ಇಂದು ಮೈಸೂರಿನಲ್ಲಿ ಎಐಡಿಎಸ್ ಓ ಸಂಘಟನೆಯ ವತಿಯಿಂದ ರಾಜ್ಯ ಸರ್ಕಾರವು 10ನೇ ತರಗತಿಯ ಕನ್ನಡ ಪಠ್ಯದಿಂದ ಭಗತ್ ಸಿಂಗ್ ಕುರಿತ ಪಾಠವನ್ನು ಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಎಐಡಿಎಸ್ ಓ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಅವರು ಶಿಕ್ಷಣವು ಪ್ರಜಾತಾಂತ್ರಿಕ ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕವಾಗಿರಬೇಕೆಂಬುದು ನಮ್ಮ ನವೋದಯ ಚಳುವಳಿಯ ಹರಿಕಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹಲವು ಮಹಾನ್ ಹೋರಾಟಗಾರರ ಆಶಯವಾಗಿತ್ತು. ಆದರೆ ಇಲ್ಲಿಯವರೆಗೂ ಆಡಳಿತ ನಡೆಸಿರುವ ಎಲ್ಲಾ ಪಕ್ಷಗಳು ಈ ಆಶಯಗಳಿಗೆ ವಿರುದ್ಧವಾಗಿ ತಮ್ಮ ಅಜೆಂಡಾಗಳನ್ನು ಪುಸ್ತಕದಲ್ಲಿ ತೂರಿಸುವ ಷಡ್ಯಂತ್ರ ರೂಪಿಸುತ್ತಾ ಬಂದಿವೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಹೊಸದಾಗಿ ಪ್ರಕಟಿಸಲ್ಪಡುತ್ತಿರುವ 10ನೇ ತರಗತಿಯ ಕನ್ನಡ ಪಠ್ಯದಿಂದ, ಸ್ವಾತಂತ್ರ್ಯಕ್ಕಾಗಿ 23ನೇ ವಯಸ್ಸಿಗೆ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗರ ಕುರಿತಾದ ಪಾಠವನ್ನು ಕೈಬಿಟ್ಟು ಆರ್ ಎಸ್ಎಸ್ ಸ್ಥಾಪಕ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ ಹೋರಾಟಕ್ಕೆ ಬೆನ್ನು ತೋರಿಸಿ, ಜನತೆಯ ಐಕ್ಯತೆಗೆ ವಿರುದ್ಧವಾಗಿ ಕೋಮು ಭಾವನೆಗಳನ್ನು ಹರಡಿದ ಕೆ ಬಿ ಹೆಡ್ಗೇವಾರ್ ಭಾಷಣವನ್ನು ಸೇರಿಸಲಾಗಿದೆ. ಸ್ಥಾಪಿತ ಸತ್ಯವನ್ನು ತಿರುಚುವ ಸರ್ಕಾರದ ಈ ವಿತಂಡವಾದವನ್ನು ಎಐಡಿಎಸ್ಓ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ. ಆಡಳಿತಾರೂಢ ಬಿಜೆಪಿ ಮತ್ತು ಸಂಘಪರಿವಾರದವರಿಗೆ ಭಗತ್ ಸಿಂಗ್ ಸೇರಿದಂತೆ ಈ ದೇಶದ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲದಿರುವುದನ್ನು ಇದು ಸ್ಪಷ್ಟೀಕರಿಸುತ್ತದೆ. ಮತ್ತು ಅವರ ವಿಚಾರಧಾರೆಯನ್ನು ಇದು ಎತ್ತಿತೋರಿಸುತ್ತದೆ. ಇದರ ಜೊತೆಯಲ್ಲೇ ಜನಾಂಗೀಯ ದ್ವೇಷವನ್ನು ಖಂಡಿಸುವ ಪಿ. ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ಎ ಎನ್ ಮೂರ್ತಿರಾಯರ ‘ವ್ಯಾಘ್ರಗೀತೆ’, ಸಾರಾ ಅಬೂಬಕರ್ ಅವರ ‘ಯುದ್ಧ’ ದಂತಹ ಹಲವು ಮೌಲ್ಯಯುತ ಪಾಠಗಳನ್ನು ಕೈಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ ಓ ಜಿಲ್ಲಾ ಉಪಾಧ್ಯಾಕ್ಷರಾದ ಆಸಿಯಾ, ಕಾರ್ಯದರ್ಶಿ ಚಂದ್ರಕಲಾ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸ್ವಾತಿ, ಚೆಲುವನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದನ್, ಚಂದ್ರಿಕಾ, ಹೇಮ, ಹೇಮಲತಾ, ಪ್ರಶಾಂತಿ, ಶಿವು ಮೋನಿಷಾ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: