ಕರ್ನಾಟಕಪ್ರಮುಖ ಸುದ್ದಿ

ಕೆಲವು ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯಬೇಕು ; ಬಸವರಾಜ ಹೊರಟ್ಟಿ

ರಾಜ್ಯ(ಬೆಂಗಳೂರು),ಮೇ.17 : ಕೆಲವು ಅನಿವಾರ್ಯತೆಗಳು ಬರುತ್ತವೆ. ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಇಂದು ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬಸವರಾಜ ಹೊರಟ್ಟಿ, ರಾಜ್ಯಪಾಲರು ಸಭಾಪತಿ ಸ್ಥಾನಕ್ಕೆ ನಾನು ಕೊಟ್ಟ ರಾಜೀನಾಮೆ ಅಂಗೀಕರಿಸಿದ್ದಾರೆ. ಈ ರೀತಿ ಸಂದರ್ಭ ಮೊದಲ ಸಲ ಸೃಷ್ಟಿಯಾಗಿದೆ. ಈಗ ಸಭಾಪತಿಯೂ ಇಲ್ಲ, ಉಪಸಭಾಪತಿಯೂ ಇಲ್ಲ ಎಂದಿದ್ದಾರೆ.

ಹಂಗಾಮಿ ಸಭಾಪತಿ ನೇಮಕ ಆಗಬೇಕು. ಸರ್ಕಾರ ಕಳಿಸಿದ ಹೆಸರಿಗೆ ರಾಜ್ಯಪಾಲರು ಅಂಗೀಕರಿಸಬಹುದು. ಹಂಗಾಮಿ ಸಭಾಪತಿ ನೇಮಕ ಬಳಿಕ ನನ್ನ ಪರಿಷತ್ ಸ್ಥಾನದ ರಾಜೀನಾಮೆ ಅಂಗೀಕಾರ ಆಗಲಿದೆ. ನನ್ನ ರಾಜೀನಾಮೆಯನ್ನು ಸಭಾಪತಿ ಅಥವಾ ಉಪಸಭಾಪತಿ ಅಂಗೀಕರಿಸಬೇಕು ಎಂದು ತಿಳಿಸಿದ್ದಾರೆ.

ಇಂದು ಹಂಗಾಮಿ ಸಭಾಪತಿ ನೇಮಕ ಆಗಬಹುದು. ಅವರು ಬಂದ ಮೇಲೆ ರಾಜೀನಾಮೆ ಅಂಗೀಕರಿಸ್ತಾರೆ. ರಾಜೀನಾಮೆ ಅಂಗೀಕಾರ ಬಳಿಕ ಬಿಜೆಪಿ ಸೇರ್ಪಡೆ. ಇವತ್ತೇ ಸೇರ್ಪಡೆಯಾಗುವ ಬಗ್ಗೆ ಬಿಜೆಪಿ ಪಕ್ಷ ನಿರ್ಧರಿಸಬೇಕು ಎಂದು ತಿಳಿಸಿದ್ದಾರೆ.

ಹೆಡಗೇವಾರ್ ಪಠ್ಯ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಎಸ್‍ಆರ್ಟಿಯವರು ಪಠ್ಯ ಕ್ರಮದ ತೀರ್ಮಾನ ಮಾಡ್ತಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಹೆಡಗೇವಾರ್ ಪಠ್ಯ ಸೇರ್ಪಡೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ದೈಹಿಕ ಶಿಕ್ಷಕರಾಗಿದ್ದಾಗ ಡಬಲ್ ವೇತನ ಪಡೆದ ಆರೋಪಕ್ಕೆ ಪ್ರತಿಕ್ರಿಯಿಸಿ, ಇದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನಾನು ದೈಹಿಕ ಶಿಕ್ಷಕನಾಗಿ ಕೆಲಸ ಮಾಡ್ತಿದ್ದೆ. ಆಗ ಶಿಕ್ಷಕರು ಚುನಾವಣೆ ಸ್ಪರ್ಧೆಗೆ ಮುಂಚಿತ ಅನುಮತಿ ಕಡ್ಡಾಯ ಇತ್ತು. ಕೋರ್ಟ್ ಆದೇಶದ ಮೇರೆಗೆ ನಾನು ಚುನಾವಣೆ ಸ್ಪರ್ಧೆ ಮಾಡಿದ್ದೇನೆ. ಕಾನೂನು ಮೀರಿ ಯಾವ ಕೆಲಸವೂ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಹೇಗೆ ಹೊಂದಾಣಿಕೆ ಮಾಡ್ಕೊಳ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಬಿಜೆಪಿಯಲ್ಲಿ ಇನ್ನೂ ಕಾಲಿಟ್ಟಿಲ್ಲ. ನಾನು ಎಲ್ಲೇ ಇದ್ರೂ ನನ್ನ ಅಭಿಪ್ರಾಯ ನೇರವಾಗಿ ಹೇಳ್ತೇನೆ. ಈ ಹಂತದಲ್ಲಿ ನಾನು ಏನೂ ಹೇಳಲು ಆಗಲ್ಲ ಎಂದಿದ್ದಾರೆ.

ಹಿಂದೆ ಕಾಂಗ್ರೆಸ್ ನಿಂದಲೂ ಆಹ್ವಾನ ಬಂದಿತ್ತು. 2016 ರಲ್ಲಿ ಸಿದ್ದರಾಮಯ್ಯ ಕರೆದಿದ್ರು. ಈಗ ಯಾವುದೇ ಆಹ್ವಾನ ಕಾಂಗ್ರೆಸ್ ನಿಂದ ಬಂದಿರ್ಲಿಲ್ಲ. ಕೆಲವು ಅನಿವಾರ್ಯತೆಗಳು ಬರುತ್ತವೆ. ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯಬೇಕು. ನಮ್ಮ ಶಿಕ್ಷಕ ಮಿತ್ರರೂ ಬಿಜೆಪಿ ಸೇರುವ ಸಲಹೆ ಕೊಟ್ಟರು. ಆಕಸ್ಮಿಕವಾದ ಸಂದರ್ಭದಲ್ಲಿ ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದೇನೆ. ಈಗ ಹಂಗಾಮಿ ಸಭಾಪತಿ ನೇಮಕ ಮಾಡಲಾಗಿದೆ. ನಾನು ವಿಧಾನಸೌಧಕ್ಕೆ ಹೋಗಿ ಹಂಗಾಮಿ ಸಭಾಪತಿ ಗೆ ರಾಜೀನಾಮೆ ಸಲ್ಲಿಸ್ತೇನೆ ಎಂದು ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: