ಮೈಸೂರು

ರೈತರ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಬೇಕೆಂಬ ಬಯಕೆ ಯಾಕಿಲ್ಲ

ಮೈಸೂರು, ಮೇ.17:- ಸಂಬಳ, ಸಾರಿಗೆ ಭತ್ಯೆ ಹೆಚ್ಚಳ ಮಾಡಿಕೊಳ್ಳುವ ಎಂಎಲ್ಎ ಗಳಿಗೆ ರೈತರ ಉತ್ಪನ್ನಗಳಿಗೆ ಬೆಲೆ ಏರಿಕೆ ಮಾಡಬೇಕೆಂಬ ಬಯಕೆ ಯಾಕಿಲ್ಲ ಎಂದು ರೈತರು ಪ್ರಶ್ನಿಸಿದರು.

ಇಂದು ತಿ.ನರಸೀಪುರ ದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ರೈತರು ರೈತ ಬೆಳೆದ ಭತ್ತ, ಕಬ್ಬು ಇನ್ನಿತರ ಬೆಳೆಗಳಿಗೆ ಭಿಕ್ಷೆ ರೂಪದಲ್ಲಿ ದರ ಏರಿಕೆ, ಜನಸೇವೆ ಮಾಡುವ ಎಂಎಲ್ಎಗಳು ,ಮಂತ್ರಿಗಳಿಗೆ, ಸಂಬಳವನ್ನು ಯಾವುದೇ ಚರ್ಚೆಯಿಲ್ಲದೆ ಮನಬಂದಂತೆ ಏರಿಕೆ, ಸರ್ಕಾರಗಳು ರೈತ ವಿರೋಧಿ ನೀತಿಗಳನ್ನ ರೂಪಿಸುತ್ತಾ ರೈತರ ಸಮಾಧಿ ಕಟ್ಟಲು ಯೋಜನೆಗಳನ್ನು ರೂಪಿಸುತ್ತಿವೆ ,ಇಂತಹ ಕಾರ್ಯದಿಂದಲೇ ಶ್ರೀಲಂಕಾದಲ್ಲಿ ಜನರು ದಂಗೆ ಎದ್ದು ಪ್ರಧಾನಿ ಮನೆಗೆ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದಾರೆ ಎಂಬುದನ್ನು ಸರ್ಕಾರಗಳು ಅರಿತುಕೊಳ್ಳಬೇಕು ಎಂದರು.

ರಸಗೊಬ್ಬರ ಬೆಲೆ 850ರಿಂದ 1700ಕ್ಕೆ, ಸೂರ್ಯಕಾಂತಿ ಬಿತ್ತನೆ ಬೀಜದ ಬೆಲೆ 1100ರಿಂದ 2300 ಕ್ಕೆ, ಡೀಸೆಲ್ ಬೆಲೆ ಕೀಟನಾಶಕ ಬೆಲೆ ಮನೆ ಬಳಸುವ ಗ್ಯಾಸ್ ಬೆಲೆ ಎಲ್ಲವು ಏರಿಕೆಯಾಗಿದೆ .ಎಂಎಲ್ಎ ಮಂತ್ರಿಗಳ , ಸರ್ಕಾರಿ ನೌಕರರ ಸಂಬಳ ಏರಿಕೆಯಾಗಿದೆ, ರೈತನ ಉತ್ಪಾದನ ವೆಚ್ಚ ಏರಿಕೆಯಾಗಿದೆ ಆದರೆ ರೈತನ ಉತ್ಪನ್ನದ ಬೆಲೆ ಮಾತ್ರ ಕುಸಿಯುತ್ತಿದೆ. ಈ ಬಗ್ಗೆ ಯಾವುದೇ ಎಮ್ಎಲ್ಎ, ಮಂತ್ರಿಗಳು ಮಾತನಾಡುವುದಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಆಕರ್ಷಣೀಯವಾಗಿ ಮಾತನಾಡುತ್ತಾರೆ . ರೈತರು ಜಾಗೃತರಾಗಿ ಎಚ್ಚರಿಕೆ ಯಾಗದಿದ್ದರೆ  ಗುಲಾಮರಾಗಿ ಮಾಡುತ್ತಾರೆ. ನಮ್ಮ ದೇಶದ ಜನರ ಆಹಾರಕ್ಕಾಗಿ ಅಮೇರಿಕಾ ದೇಶದ ಗೋಧಿಯನ್ನು ಭಿಕ್ಷೆ ಬೇಡುತ್ತಿದ್ದ ಕಾಲ ಹೋಗಿ ಇಂದು 300 ಲಕ್ಷ ಮಿಲಿಯನ್ ಟನ್ ಆಹಾರ ರೈತರ ಶ್ರಮದಿಂದ ಬೆಳೆಯುತ್ತಿದ್ದೇವೆ.  ಇಂದು ಬೇರೆ ಬೇರೆ ದೇಶಗಳಿಗೆ ಆಹಾರ ದಾನ ಮಾಡುತ್ತಿದ್ದೇವೆ. ಇದನ್ನು ಕೇಂದ್ರ ಸರ್ಕಾರ ಮರೆತು ರೈತರನ್ನು ಬಲಿಕೊಡುವ ಕಾರ್ಯಕ್ಕೆ ಮುಂದಾಗಬಾರದು.
ಸಕ್ಕರೆ ಕಾರ್ಖಾನೆ , ಶಿಕ್ಷಣ ಸಂಸ್ಥೆಯ , ಮಾಲೀಕರು
ಭೂ ಮಾಫಿಯಾ ಸರ್ಕಾರಿ ಜಮೀನು ನುಂಗುವ ಖದೀಮರು ಹಣ ಬಲದಿಂದ ವಾಮಮಾರ್ಗಗಳನ್ನು ಬಳಸಿ ಎಂಎಲ್ಎ, ಮಂತ್ರಿಗಳು ಆಗುತ್ತಿದ್ದಾರೆ ಇವರು ಕಾನೂನುಗಳನ್ನು ಗಾಳಿಗೆ ತೂರಿ ದಂಧೆ ನಡೆಸುತ್ತಿದ್ದಾರೆ. ಅದಕ್ಕಾಗಿ ರೈತರು ಎಚ್ಚೆತ್ತುಕೊಳ್ಳಬೇಕು ಎಂದರು.
ಗ್ರಾಮ ಘಟಕದ ಉದ್ಘಾಟನೆ ಕಬ್ಬಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ರೈತರು ಸಂಘಟಿತರಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಗ್ರಾಮ ಘಟಕಗಳ ಸಂಘಟನೆ ಅವಶ್ಯಕ. ಅದೇ ರೀತಿ ರೈತರ ಪ್ರತಿನಿಧಿ ಶಾಸನಸಭೆಯಲ್ಲಿ ಮೊಳಗುವಂತೆ ಆಗಬೇಕು ಆಗ ರೈತರ ಶಕ್ತಿ ಹೆಚ್ಚುತ್ತದೆ ಎಂದರು.
ರೈತ ಮುಖಂಡರುಗಳಾದ ಹತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ, ರೈತರ ಸಂಘಟನೆಯ ಮಹತ್ವದ ಬಗ್ಗೆ ತಿಳಿಸಿದರು. ಸಭೆಯಲ್ಲಿ ತಾಲೂಕ ಅಧ್ಯಕ್ಷ ಕುರುಬೂರು ಸಿದ್ದೇಶ್, ವಾಟಳ್ ಪುರದ ನಾಗೇಶ್, ಶಂಭುಲಿಂಗಪ್ಪ, ಚಿನ್ನಸ್ವಾಮಿ ಸುರೇಶ್ ಶಿವಕುಮಾರಸ್ವಾಮಿ, ಹಾಡ್ಯರವಿ . ಬರಡನಪುರ ನಾಗರಾಜ್, ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: