ಕರ್ನಾಟಕಪ್ರಮುಖ ಸುದ್ದಿ

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ರಾಜ್ಯ(ಮಡಿಕೇರಿ),ಮೇ.19:-ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಮತ್ತು ಸಂತ ಮೈಕಲರ ಪ್ರೌಢಶಾಲೆಯಲ್ಲಿ ಮೇ, 21 ಮತ್ತು 22 ರಂದು ನಡೆಯಲಿರುವ ಪದವೀಧರ ಪ್ರಾಥಮಿಕ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶಿಸಿದ್ದಾರೆ.
ಪರೀಕ್ಷಾ ಅವಧಿಯಲ್ಲಿ ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಇನ್ನಾವುದೇ ವಸ್ತುಗಳನ್ನು ಹಂಚುವುದು, ರವಾನಿಸುವುದು ಮತ್ತಿತರ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿದೆ.
ಪರೀಕ್ಷಾ ಕೇಂದ್ರದೊಳಗೆ ಪರೀಕ್ಷಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್, ಬ್ಲೂ ಟೂತ್, ಸ್ಮಾರ್ಟ್ ವಾಚ್ ಮುಂತಾದ ಯಾವುದೇ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು, ಮಾಹಿತಿಯನ್ನು ರವಾನಿಸುವ, ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದು ಮುಂತಾದ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷೆ ಮುಗಿಯುವ ವರೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ಮತ್ತು ಈ ವ್ಯಾಪ್ತಿಯಲ್ಲಿ ಧ್ವನಿವರ್ದಕ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: